ಮೇಲ್ಸೇತುವೆ ಕುಸಿತಕ್ಕೆ ಬಿಎಂಸಿ ಹೊಣೆ, ರೈಲ್ವೆಯಲ್ಲ: ಮುಂಬೈ ಪೊಲೀಸ್

Update: 2019-03-15 13:58 GMT

ಮುಂಬೈ,ಮಾ.15: ಗುರುವಾರ ಸಂಭವಿಸಿದ ರೈಲ್ವೆ ಮೇಲ್ಸೇತುವೆ ಕುಸಿತಕ್ಕೆ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯೇ ಕಾರಣವಾಗಿದೆ ಎಂದು ಆರೋಪಿಸಿ ಶುಕ್ರವಾರ ಎಫ್‌ಐಆರ್ ಅನ್ನು ಮುಂಬೈ ಪೊಲೀಸರು ದಾಖಲಿಸಿದ್ದಾರೆ. ಈ ದುರಂತದಲ್ಲಿ ಆರು ಜನರು ಮೃತಪಟ್ಟಿದ್ದು,31ಜನರು ಗಾಯಗೊಂಡಿದ್ದಾರೆ. ಕುಸಿದು ಬಿದ್ದ ಮೇಲ್ಸೇತುವೆಯ ನಿರ್ವಹಣೆಯು ತನ್ನ ಅಧಿಕಾರ ವ್ಯಾಪ್ತಿಗೆ ಸೇರಿದ್ದಾಗಿತ್ತು ಎನ್ನುವುದನ್ನು ಬಿಎಂಸಿಯು ಒಪ್ಪಿಕೊಂಡಿರುವುದರಿಂದ,ದುರಂತದಲ್ಲಿ ರೈಲ್ವೆಯ ಹೊಣೆಗಾರಿಕೆಯಿಲ್ಲ ಎಂದು ಪೊಲೀಸರು ಹೇಳಿದರು.

ಶುಕ್ರವಾರ ಸಂಜೆಯೊಳಗೆ ದುರಂತಕ್ಕೆ ಪ್ರಾಥಮಿಕ ಹೊಣೆಗಾರಿಕೆಯನ್ನು ನಿಗದಿಗೊಳಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬಿಎಂಸಿ ಆಯುಕ್ತ ಅಜಯ್ ಮೆಹ್ತಾ ಅವರಿಗೆ ನಿರ್ದೇಶ ನೀಡಿದ ಬೆನ್ನಿಗೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಿಎಂಸಿಯು ಆರು ತಿಂಗಳ ಹಿಂದೆ ಸಲ್ಲಿಸಿದ್ದ ವರದಿಯಲ್ಲಿ ಈ ಮೇಲ್ಸೇತುವೆಯು ಬಳಕೆಗೆ ಅರ್ಹವಾಗಿದೆ ಎಂದು ಘೋಷಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಕುಸಿದು ಬಿದ್ದ ಮೇಲ್ಸೇತುವೆಯು ಸಿಎಸ್‌ಎಂಟಿಯನ್ನು ಆಝಾದ್ ಮೈದಾನ ಪೊಲೀಸ್ ಠಾಣೆಯೊಂದಿಗೆ ಸಂಪರ್ಕಿಸುತ್ತಿತ್ತು. 2008ರ ಮುಂಬೈ ದಾಳಿಯ ಭಯೋತ್ಪಾದಕರಲ್ಲೋರ್ವನಾಗಿದ್ದ ಅಜ್ಮಲ್ ಕಸಬ್ ದಾಳಿ ವೇಳೆ ಇದೇ ಸೇತುವೆಯನ್ನು ಬಳಸಿದ್ದರಿಂದ ಇದನ್ನು ‘ಕಸಬ್ ಸೇತುವೆ’ ಎಂದೂ ಕರೆಯಲಾಗುತ್ತಿತ್ತು. ಮೂರು ದಶಕಗಳಷ್ಟು ಹಳೆಯದಾಗಿದ್ದ ಈ ಸೇತುವೆಯು ಬಿಎಂಸಿ ಕಚೇರಿಗೂ ಹತ್ತಿರದಲ್ಲಿದೆ.

ಸೇತುವೆಯು ಕುಸಿದು ಬಿದ್ದಾಗ ಸಮೀಪದ ಟ್ರಾಫಿಕ್ ಸಿಗ್ನಲ್ ಕೆಂಪು ಬಣ್ಣವನ್ನು ತೋರಿಸುತ್ತಿದ್ದರಿಂದ ಹಲವಾರು ವಾಹನಗಳು ನಿಂತು ಹಸಿರು ದೀಪಕ್ಕಾಗಿ ಕಾಯುತ್ತಿದ್ದವು. ಇದರಿಂದಾಗಿ ಸಂಭಾವ್ಯ ಹಲವಾರು ಸಾವುನೋವುಗಳು ತಪ್ಪಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News