‘737 ಮ್ಯಾಕ್ಸ್’ ವಿಮಾನಗಳ ಹಸ್ತಾಂತರ ಸ್ಥಗಿತ

Update: 2019-03-15 16:16 GMT

ನ್ಯೂಯಾರ್ಕ್, ಮಾ. 15: ತನ್ನ ಬಹುಬೇಡಿಕೆಯ ‘737 ಮ್ಯಾಕ್ಸ್’ ಮಾದರಿಯ ಎರಡನೇ ವಿಮಾನ ಪತನಗೊಂಡ ಬಳಿಕ, ಅಮೆರಿಕದ ವಿಮಾನ ತಯಾರಿಕಾ ಕಂಪೆನಿ ಬೋಯಿಂಗ್, ವಿಮಾನಗಳ ಹಸ್ತಾಂತರವನ್ನು ನಿಲ್ಲಿಸಿದೆ, ಆದರೆ ವಿಮಾನಗಳ ಉತ್ಪಾದನೆ ಮುಂದುವರಿಯಲಿದೆ ಎಂದು ಕಂಪೆನಿಯ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ನಾವೊಂದು ಪರಿಹಾರ ಕಂಡುಕೊಳ್ಳುವವರೆಗೆ ‘737 ಮ್ಯಾಕ್ಸ್’ ಮಾದರಿಯ ವಿಮಾನಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವುದನ್ನು ಸ್ಥಗಿತಗೊಳಿಸಿದ್ದೇವೆ’’ ಎಂದು ವಕ್ತಾರರು ಹೇಳಿದರು.

‘‘ನಾವು ಉತ್ಪಾದನೆಯನ್ನು ಮುಂದುವರಿಸುತ್ತೇವೆ. ಆದರೆ, ನಾವು ನಮ್ಮ ಸಾಮರ್ಥ್ಯಗಳನ್ನು ಅಂದಾಜಿಸುತ್ತಿದ್ದೇವೆ’’ ಎಂದರು.

ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ‘ಬೋಯಿಂಗ್ 737 ಮ್ಯಾಕ್ಸ್ 8’ ಮಾದರಿಯ ವಿಮಾನವೊಂದು ರವಿವಾರ ಪತನಗೊಂಡಿರುವುದನ್ನು ಸ್ಮರಿಸಬಹುದಾಗಿದೆ. ಈ ದುರಂತದಲ್ಲಿ 157 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಘಟನೆಯ ಬಳಿಕ, ಅಪಘಾತದ ಕಾರಣ ಗೊತ್ತಾಗುವವರೆಗೆ ಜಗತ್ತಿನ ಹೆಚ್ಚಿನ ದೇಶಗಳು ಈ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News