ಚೀನಾದ ಯುಫೆಯ್, ಶಿ ಯುಕಿಗೆ ಅಗ್ರ ಶ್ರೇಯಾಂಕ

Update: 2019-03-15 17:59 GMT

ಹೊಸದಿಲ್ಲಿ, ಮಾ.15: ಇಲ್ಲಿನ ಇಂದಿರಾಗಾಂಧಿ ಅಂತರ್‌ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾ.26ರಿಂದ ಆರಂಭವಾಗಲಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ನೂತನ ಚಾಂಪಿಯನ್ ಚೆನ್ ಯುಫೆಯ್ ಹಾಗೂ ಹಾಲಿ ಪುರುಷರ ಸಿಂಗಲ್ಸ್ ಚಾಂಪಿಯನ್ ಶಿ ಯುಕಿಗೆ ಅಗ್ರ ಶ್ರೇಯಾಂಕ ನೀಡಲಾಗಿದೆ.

ಸತತ ಎಂಟು ವರ್ಷಗಳ ಕಾಲ ಸಿರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದಿದ್ದ ಸುಮಾರು 2 ಕೋ. 40 ಲಕ್ಷ ರೂ. ಮೊತ್ತದ ಟೂರ್ನಿಯು ಈ ಬಾರಿ ಹೊಸ ಸ್ಥಳದಲ್ಲಿ ನಡೆಯುತ್ತಿರುವುದಲ್ಲದೆ ಚೀನಾದ ಪ್ರಮುಖ ಸ್ಪರ್ಧಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ.

ಮಹಿಳಾ ಸಿಂಗಲ್ಸ್‌ನ ಮುಖ್ಯ ಡ್ರಾ 6 ಮಂದಿ ಚೀನಾದ ಆಟಗಾರ್ತಿಯರನ್ನು ಒಳಗೊಂಡಿದ್ದು, ವಿಶ್ವದ ನಂ.7 ಹೆ ಬಿಂಗ್‌ಜಿಯಾವೊ ಹಾಗೂ ವಿಶ್ವದ ನಂ.14 ಹಾನ್ ಯ್ಯು ಕ್ರಮವಾಗಿ ಮೂರು ಹಾಗೂ ಏಳನೇ ಶ್ರೇಯಾಂಕ ಪಡೆದಿದ್ದಾರೆ. ಮಾಜಿ ಚಾಂಪಿಯನ್ ಹಾಗೂ 2012ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಲೀ ಕ್ಸುರು ಮತ್ತೆ ಮರಳಿದ್ದು, ಚೆನ್ ಕ್ಸಿಯಾಕ್ಸಿನ್ ಹಾಗೂ ಕಾಯ್ ಯಾನ್ಯಾನ್ ಟೂರ್ನಿಯ ಮುಖ್ಯ ಡ್ರಾನಲ್ಲಿರುವ ಚೀನಾದ ಇತರ ಆಟಗಾರ್ತಿಯರು.

ಟೂರ್ನಿಯಲ್ಲಿ ಭಾರತದ ಸವಾಲನ್ನು ಎರಡನೇ ಶ್ರೇಯಾಂಕ ಪಡೆದಿರುವ ಹಾಗೂ 2017ರ ಚಾಂಪಿಯನ್ ಪಿ.ವಿ.ಸಿಂಧು ಮುನ್ನಡೆಸಲಿದ್ದು, ಎರಡು ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್‌ಗೆ 5ನೇ ಶ್ರೇಯಾಂಕ ನೀಡಲಾಗಿದೆ.

ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ವಿಕ್ಟರ್ ಅಕ್ಸೆಲ್‌ಸೆನ್ ಶರಣಾಗಿ ಅಭಿಯಾನ ಕೊನೆಗೊಳಿಸಿದ್ದ ಚೀನಾದ ಶಿ ಯುಕಿ ಇಂಡಿಯಾ ಓಪನ್‌ನಲ್ಲಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲಿ ಅವರು ತಮ್ಮದೇ ದೇಶದ ಹುವಾಂಗ್ ಯುಕ್ಸಿಯಾಂಗ್‌ರನ್ನು ಎದುರಿಸಲಿದ್ದಾರೆ. ವಿಶ್ವದ ನಂ.19 ಆಟಗಾರ ಲು ಗುವಾಂಗ್‌ಝು ಹಾಗೂ 37ನೇ ರ್ಯಾಂಕಿನ ರೊವಾ ಜುನ್‌ಪೆಂಗ್ ಪರಸ್ಪರ ಪೈಪೋಟಿ ನಡೆಸಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ 3ನೇ ಶ್ರೇಯಾಂಕ ಪಡೆದಿರುವ ಭಾರತದ ಜೋಡಿ ಸಾತ್ವಿಕ್ ಸಾಯಿ ರೆಡ್ಡಿ-ಚಿರಾಗ್ ಶೆಟ್ಟಿ, ಹಾಗೂ ಮನು ಅತ್ರಿ-ಸುಮಿತ್‌ರೆಡ್ಡಿ ದೇಶವನ್ನು ಡಬಲ್ಸ್‌ನಲ್ಲಿ ಪ್ರತಿನಿಧಿಸಲಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ- ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಪ್ರಣವ್ ಜೆರ್ರಿ ಚೋಪ್ರಾ-ಸಿಕ್ಕಿ ರೆಡ್ಡಿ ಭಾರತದ ಪರ ಸ್ಪರ್ಧೆಗೆ ಸಿದ್ಧವಾಗಿದ್ದಾರೆ.

► ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಆರು ತಾರೆಗಳು

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತ ತಂಡವನ್ನು 6 ಜನ ಪ್ರತಿನಿಧಿಸುತ್ತಿದ್ದಾರೆ. 2015ರ ಚಾಂಪಿಯನ್ ಕಿಡಂಬಿ ಶ್ರೀಕಾಂತ್‌ಗೆ 3ನೇ ಶ್ರೇಯಾಂಕ ನೀಡಲಾಗಿದ್ದರೆ, ಬಿಡಬ್ಲುಎಫ್ ವಿಶ್ವ ಟೂರ್ ಸೆಮಿ ಫೈನಲಿಸ್ಟ್ ಸಮೀರ್ ವರ್ಮಾ 5ನೇ ಶ್ರೇಯಾಂಕ ಪಡೆದಿದ್ದಾರೆ. ಸಾಯಿ ಪ್ರಣೀತ್, ಎಚ್.ಎಸ್.ಪ್ರಣಯ್, ಪರುಪಳ್ಳಿ ಕಶ್ಯಪ್ ಹಾಗೂ ಶುಭಾಂಕರ್ ಡೇ ಸಿಂಗಲ್ಸ್ ವಿಭಾಗದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News