ಶಿವಮೊಗ್ಗ ಲೋಕಸಭಾ ಕ್ಷೇತ್ರ: ಮಾಜಿ ಸಿಎಂ ಪುತ್ರರ ಸ್ಪರ್ಧೆಗೆ ಅಖಾಡ ಸಜ್ಜು

Update: 2019-03-15 18:49 GMT

ಶಿವಮೊಗ್ಗ, ಮಾ. 15: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಎಪ್ರಿಲ್ 23 ರಂದು ಚುನಾವಣೆ ನಿಗದಿಯಾಗಿದೆ. ಕ್ಷೇತ್ರದಲ್ಲಿ ಕ್ರಮೇಣ ರಾಜಕೀಯ ಚಟುವಟಿಕೆಗಳು ಬಿಸಿಯೇರಲಾರಂಭಿಸಿವೆ. ನಿರೀಕ್ಷಿಸಿದಂತೆ, ಮತ್ತೆ ಮಾಜಿ ಮುಖ್ಯಮಂತ್ರಿಗಳಿಬ್ಬರ ಪುತ್ರರ ಅಖಾಡಕ್ಕೆ ವೇದಿಕೆ ಸಜ್ಜಾಗಿದೆ. ಮತ್ತೊಮ್ಮೆ ಜಿದ್ದಾಜಿದ್ದಿನ ಹಣಾಹಣಿಗೆ ಕ್ಷೇತ್ರ ಸಾಕ್ಷಿಯಾಗುವುದು ಬಹುತೇಕ ಖಚಿತವಾಗಿದೆ. 

ಕಳೆದ 5 ತಿಂಗಳ ಹಿಂದೆ ಕ್ಷೇತ್ರಕ್ಕೆ ನಡೆದ ಉಪ ಚುನಾಣೆಯಲ್ಲಿ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ, ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮುಖಾಮುಖಿಯಾಗುತ್ತಿದ್ದಾರೆ.

ಕಳೆದ ಉಪ ಚುನಾವಣೆಯಲ್ಲಿ, ಈ ಯುವ ನಾಯಕರಿಬ್ಬರ ಸ್ಪರ್ಧೆಯು ಇಡೀ ರಾಷ್ಟ್ರ ಹಾಗೂ ರಾಜ್ಯದ ಗಮನ ಸೆಳೆದಿತ್ತು. ಭಾರೀ ಪೈಪೋಟಿ ಏರ್ಪಟ್ಟಿತ್ತು. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು. ಘಟಾನುಘಟಿ ರಾಜಕಾರಣಿಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಅಂತಿಮವಾಗಿ ಬಿ.ವೈ.ರಾಘವೇಂದ್ರ ಗೆಲುವಿನ ನಗೆ ಬೀರಿದ್ದರು.

ನಿರೀಕ್ಷಿಸಿದಂತೆ ಕೆಲವೇ ತಿಂಗಳ ಅಂತರದಲ್ಲಿ, ಮತ್ತೆ ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ತೊಡೆ ತಟ್ಟಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಬಿ.ವೈ.ಆರ್ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತುತ್ತಿದ್ದಾರೆ. ಇನ್ನೊಂದೆಡೆ ಕಣಕ್ಕಿಳಿಯುವುದು ನಿಶ್ಚಿತವಾಗಿದ್ದರೂ, ಇಲ್ಲಿಯವರೆಗೂ ಮಧು ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿಲ್ಲ. ಇದು ಹಲವು ರೀತಿಯ ಊಹಾ ಪೋಹ ಗಳಿಗೂ ಎಡೆ ಮಾಡಿಕೊಟ್ಟಿದೆ. ಆದರೆ ಜೆಡಿಎಸ್ ಮೂಲಗಳ ಅನುಸಾರ, ಇನ್ನೂ ಕೆಲ ದಿನಗಳಲ್ಲಿಯೇ ಅವರು ಜಿಲ್ಲೆಯಲ್ಲಿ ವಿಧ್ಯುಕ್ತ ವಾಗಿ ಪ್ರಚಾರ ಆರಂಭಿಸುವ ಸಾಧ್ಯತೆಯಿದೆ.

ಪ್ರತಿಷ್ಠೆ: ’ಸದ್ಯದ ಕ್ಷೇತ್ರದ ಚುನಾವಣಾ ವಿದ್ಯಮಾನ ಅವಲೋಕಿಸಿದರೆ, ಈ ಬಾರಿಯೂ ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯೇ ಪ್ರಮುಖವಾಗಿ ಕಂಡುಬರುತ್ತಿದೆ. ಹಾಲಿ ಸಂಸದ ಬಿ.ವೈ.ಆರ್ ಮತ್ತೆ ಗೆಲುವು ಸಾಧಿಸಿ, ಕ್ಷೇತ್ರದಲ್ಲಿರುವ ತಮ್ಮ ಹಿಡಿತ ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ತವರೂರಲ್ಲಿ ತಂದೆ ಬಿ.ಎಸ್.ಯಡಿಯೂರಪ್ಪರ ಪ್ರತಿಷ್ಠೆ ಉಳಿಸಿಕೊಂಡು ಹೋಗುವ ಅನಿವಾರ್ಯತೆಯಲ್ಲಿದ್ದಾರೆ. ಇನ್ನೊಂದೆಡೆ ಕಳೆದ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಯಲ್ಲಿ ಸತತ ಸೋಲನುಭವಿಸಿರುವ ಮಧುಗೆ, ಈ ಚುನಾವಣೆಯಲ್ಲಿ ಜಯ ಸಾಧಿಸಲೇಬೇಕಾದ ಒತ್ತಡದಲ್ಲಿದ್ದಾರೆ. ಈ ಚುನಾವಣೆಯು ಅವರ ರಾಜಕೀಯ ಜೀವನದ ನಿರ್ಣಾಯಕ ಘಟ್ಟವಾಗಿದೆ. ಏನಾದರೂ ಕೊಂಚ ಏರುಪೇರಾದರೂ, ಭವಿಷ್ಯದ ಅವರ ರಾಜಕೀಯ ಜೀವನದ ಹಾದಿ ಕಲ್ಲು-ಮುಳ್ಳಿನದ್ದಾಗಿರಲಿದೆ. ಸಾಕಷ್ಟು ಅಡೆತಡೆ ಎದುರಿ ಸಬೇಕಾಗುತ್ತದೆ’ ಎಂದು ರಾಜಕೀಯ ವಿಶ್ಲೇಷಕರು ವಿಮರ್ಶಿಸುತ್ತಾರೆ. 

ಪೈಪೋಟಿ: ಕಳೆದ ಉಪ ಚುನಾವಣೆ ಯಲ್ಲಿ ಬಿಜೆಪಿಯ ವ್ಯಾಪಕ ಸಿದ್ದತೆಯ ಹೊರತಾಗಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ನಿರೀಕ್ಷೆಗೂ ಮೀರಿದ ಮತಗಳಿಕೆ ಮಾಡಿತ್ತು. ಈ ಕಾರಣ ದಿಂದ ಉಪ ಚುನಾವಣೆ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಬಿಜೆಪಿಯೂ ಸಾರ್ವತ್ರಿಕ ಚುನಾವಣೆಯ ಸಿದ್ದತೆಗೆ ಚಾಲನೆ ನೀಡಿತ್ತು. ವಿಶೇಷವಾಗಿ ಸಂಸದ ಬಿ.ವೈ.ರಾಘವೇಂದ್ರ ಕ್ಷೇತ್ರದಾದ್ಯಂತ ಓಡಾಡಿಕೊಂಡಿದ್ದಾರೆ. ಜನರ ಗಮನ ಸೆಳೆಯುವ ಕಾರ್ಯ ನಡೆಸುತ್ತಿದ್ದಾರೆ. ಉತ್ತಮ ಮತಗಳಿಕೆಯ ಹೊರತಾಗಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವು, ಉಪ ಚುನಾವಣೆ ನಂತರ ಬಿಜೆಪಿ ರೀತಿಯಲ್ಲಿ ಯಾವುದೇ ವಿಶೇಷ ತಯಾರಿ ಆರಂಭಿಸಿರಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಕ್ಷೇತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳ ಚುನಾವಣಾ ಸಿದ್ಧತೆ ಯಾವ ರೀತಿಯಲ್ಲಿರಲಿದೆ ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪನವರೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲ. ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅಧಿಕೃತ ಘೋಷಣೆ ಕೂಡ ಮಾಡಿದ್ದಾರೆ. ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸುತ್ತಿದೆ. ಕಳೆದ ಉಪ ಚುನಾವಣೆಯಲ್ಲಿ ಕಾಲಾವಾಕಾಶ ಹಾಗೂ ಪೂರ್ವ ಸಿದ್ಧತೆಯ ಕೊರತೆಯ ನಡುವೆಯೂ, ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಧು ಬಂಗಾರಪ್ಪನವರು ಭಾರೀ ಪ್ರಮಾಣದ ಮತಗಳಿಕೆ ಮಾಡಿದ್ದರು. ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಲು ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಬೂತ್ ಮಟ್ಟದಿಂದ ಪಕ್ಷದ ಸಂಘಟನೆ ಪುನರ್ ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲ ದಿನಗಳಲ್ಲಿಯೇ ಎರಡು ಪಕ್ಷಗಳ ಪ್ರಮುಖರು ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ, ಮತಯಾಚನೆ ಕಾರ್ಯ ನಡೆಸಲಿದ್ದಾರೆ.
-ಎಂ.ಶ್ರೀಕಾಂತ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

 2014 ರಲ್ಲಿ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಜಯ ಸಾಧಿಸಿದ್ದರು. ಬಿಜೆಪಿ ಶೇ. 53.69, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿ ಶೇ. 21.51 ಹಾಗೂ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಗೀತಾ ಶಿವರಾಜ್‌ಕುಮಾರ್ ಶೇ. 21.31 ಹಾಗೂ ಇತರ ಅಭ್ಯರ್ಥಿಗಳ ಒಟ್ಟಾರೆ ಮತ ಗಳಿಕೆ ಪ್ರಮಾಣವು ಶೇ. 3.49 ರಷ್ಟಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕಾರಣದಿಂದ, ನಾಲ್ಕು ತಿಂಗಳ ಹಿಂದೆ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿ.ವೈ.ರಾಘವೇಂದ್ರ ಜಯ ಸಾಧಿಸಿದ್ದರು. ಬಿಜೆಪಿಯು ಶೇ. 50.72, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಶೇ. 45.85 ಹಾಗೂ ಇತರ ಅಭ್ಯರ್ಥಿಗಳು ಶೇ. 3.43 ರಷ್ಟು ಮತಗಳಿಸಿದ್ದರು..

Writer - ಬಿ.ರೇಣುಕೇಶ್

contributor

Editor - ಬಿ.ರೇಣುಕೇಶ್

contributor

Similar News