ಸ್ತ್ರೀ ಸಂವೇದನೆಯನ್ನು ನಮ್ಮೊಳಗೆ ಬಿತ್ತುವ ಕತೆಗಳು

Update: 2019-03-16 16:11 GMT

ಶ್ರೀಧರ ಬನವಾಸಿ

‘ಮಾನವ’ ಕಥೆಯನ್ನು ರಚಿಸುವಂತೆ ‘ಜೀವನ’ ಕಥೆಯನ್ನು ರಚಿಸುತ್ತದೆ. ಪ್ರಾಯಶಃ ಜೀವನಕತೆಯನ್ನು ರಚಿ ಸುತ್ತಿರುವುದರಿಂದಲೇ ಮನುಷ್ಯನಲ್ಲಿಕತೆ ರಚಿಸುವ ಪ್ರವೃತ್ತಿ ಕಾಣುತ್ತದೆ ಮನುಷ್ಯರು ರಚಿಸುವ ಕಥೆ ಮನುಷ್ಯ ಜೀವನದ ಕಥೆಯೂ ಆಗದಿದ್ದರೆ ಅದರಲ್ಲಿ ಸ್ವಾರಸ್ಯ ಇರುವುದಿಲ್ಲ. ಈ ಲೋಕದಲ್ಲಿ ಒಳ್ಳೆಯದಕ್ಕೂ ಕೆಟ್ಟದಕ್ಕೂ ನಿರಂತರ ವಾದ ಸಂಘರ್ಷ ಇರುತ್ತದೆ. ಅದು ಕೆಲವೊಮ್ಮೆ ಕಣ್ಣಿಗೆ ಕಾಣಿಸುತ್ತದೆ. ಇನ್ನು ಕೆಲವು ಸಲ ಬರಿಗಣ್ಣಿಗೆ ಕಾಣಿಸದೇ ಇರಬಹುದು. ಆದರೆ ನಾವು ಯಾರ ಕಡೆಗಿರಬೇಕು ಎಂಬ ತಿಳುವಳಿಗೆ ನಮಗೆ ಬೇಕು.’ ಈ ಮಾತನ್ನು ಹೇಳಿದವರು ಕನ್ನಡ ಕಥಾ ಜಗತ್ತಿನ ಸಾರ್ವಕಾಲಿಕ ಸಾಮ್ರಾಟರಂತಹ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು. ಕನ್ನಡನಾಡಿನ ಹಿರಿಯ ಲೇಖಕಿಯಲ್ಲೊಬ್ಬರಾಗಿರುವ ತಾರಾ ಭಟ್ ಅವರ ‘ಪರಿಧಿಯನ್ನು ಅರಸುತ್ತಾ’ ಕಥಾಸಂಕಲನವನ್ನು ಓದಿದಾಗ ಮೊದಲ ಓದಿನಲ್ಲಿ ನನಗೆ ಕಂಡಿದು,್ದ ಮಾಸ್ತಿಯವರ ಕಥಾನುಭವದ ಮಾತುಗಳ ಜೊತೆಗೆ ಕತೆಗಾರ್ತಿಯ ಆಂತರಿಕ ಸ್ತ್ರೀ ಸಂವೇದನೆಯ ಅಂಶ. ತಾನು ಸಮಾಜದ ಒಂದು ಭಾಗವಾಗಿ ತನ್ನ ಸುತ್ತಲೂ ಕಾಣುವ ಪಾತ್ರಗಳು, ಅವುಗಳತೊಳಲಾಟ, ಅನುಭವಿಸುವ ನೋವು, ಎದುರಿ ಸುವ ಪರಿ, ಪಾತ್ರ ಸಂಯೋಜನೆ ಎಲ್ಲವೂ ತಾರಾಭಟ್ ಅವರ ಈ ಕಥಾಸಂಕಲನದ ವಿಶೇಷ ವೆಂದು ನಾನು ಭಾವಿಸುವೆ. ಅದರಲ್ಲೂ ಈ ಸಂಕಲನದ ಮೂಲಕ ಮಹಿಳೆಯರು, ಹೆಣ್ಣು ಮಕ್ಕಳು ಇಂದು ಅನಾಗರಿಕ ಪೈಶಾಚಿಕ ಸ್ವಭಾವ ದಿಂದ ಬಳಲುತ್ತಿರುವ ಸಮಾಜದಲ್ಲಿ ಯಾವ ರೀತಿ ಯಲ್ಲಿ ತೊಂದರೆಯನ್ನು ಅನುಭವಿಸುತ್ತಿ ದ್ದಾರೆ ಅನ್ನುವುದನ್ನು ತುಂಬಾ ಸೂಕ್ಷ್ಮವಾಗಿ ಗುರು ತಿಸಿ ಕತೆಗಳನ್ನು ಸರಳವಾಗಿ ಹೆಣೆದಿದ್ದಾರೆ. ಮಲತಾಯಿ ಮತ್ತು ತಂದೆಯ ಪ್ರೀತಿ ಕಾಣ ದೇ ತೊಳಲಾಡುತ್ತಾ ಕೊನೆಗೆ ಗುರಿಯಿಲ್ಲದೆ ಯಾವುದೋ ದುಷ್ಟಲೋಕಕ್ಕೆ ತಳ್ಳಲ್ಪಡುವ ‘ಕಪ್ಪಾದ ಆಕಾಶ’ ಕತೆಯ ‘ಚಂದಾ’ ಈ ಸಂಕಲ ನದ ಅಂತ್ಯದವರೆಗೂ ನಮ್ಮನ್ನು ಕಾಡು ತ್ತಾಳೆ. ಅಂತಹ ಪಾತ್ರಗಳು ಆಗಾಗ ವೃತ್ತಿಪತ್ರಿಕೆಗಳಲ್ಲಿ ಬಂದಂತಹವರದಿಗಳು, ಹ್ಯೂಮನ್ ಟ್ರಾಫಿಕ್‌ನಂತಹ ಘಟನೆಗಳಿಗೆ ಪೂರಕ ವಾದಂತೆ ಈ ಕತೆ ಇದೆ. ತನ್ನದಲ್ಲದ ನೋವನ್ನು ಜೀವನವಿಡೀ ಅನುಭವಿಸುವ ಆ ಪಾತ್ರ ಈ ರೀತಿ ಬದುಕಬೇಕೇ? ಅಂತ ನಮಗೆ ನಾವೇ ಕೇಳಿಕೊಂಡರೆ ಕರುಳು ಚುರುಕ್ ಅನ್ನುತ್ತದೆ. ಅದೇ ರೀತಿ ಬೆಂಗಳೂರಿನಂತಹ ನಗರಗಳಲ್ಲಿ ಅಪಾರ್ಟ್‌ಟ್ಮೆಂಟ್ ಸಂಸ್ಕೃತಿ, ಅಲ್ಲಿರುವವರ ಕಟ್ಟು ಪಾಡು, ಸಣ್ಣತನ, ಮನಸ್ಥಿತಿಯನ್ನೊಳಗೊಂಡ ಕಥೆ ‘ನಿನ್ನ ತಾಯಿ ನಾನಾಗಿಹ ತಪ್ಪಿಗೆ...’. ಯಾವ ಜನ್ಮದ ಕರ್ಮದ ಫಲದ ಪರಿಣಾಮವೋ, ಅನಾರೋಗ್ಯ/ದೈಹಿಕ ಸಮಸ್ಯೆಯಿಂದ ವಿಕಲಾಂಗ ಮಗುವನ್ನು ಹೊಂದಿರುವ ಜಗದಂಬಾ ಒಂದೆಡೆ. ಹೆತ್ತಮಗುವಿನ ಸಮಸ್ಯೆ ಅದರಿಂದಾಗಿ ಆಕೆ ಒಳಗೊಳಗೆ ಅನುಭವಿಸುತ್ತಿರುವ ಮಾನಸಿಕ ತುಮುಲಗಳು, ಜೊತೆಗೆ ತಾನು ವಾಸಿಸುತ್ತಿರುವ ಅಪಾರ್ಟ್‌ಮೆಂಟ್ ಜನರು ಆಕೆ ಹೆತ್ತ ಮಗುವನ್ನುಅಸ್ಪಶ್ಯತೆಯಿಂದ ಕಂಡು ಅದನ್ನು ದೂರಮಾಡ ಬೇಕೆಂದು ಹಠಮಾಡಿದಾಗ ಆಕೆ ತನಗೊದಗಿದ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿಯಾಳು? ವಿಕಲಾಂಗ/ಬುದ್ಧಿಮಾಂದ್ಯ ಮಕ್ಕಳನ್ನುಹೆತ್ತ ತಾಯಂದಿರ ನೋವನ್ನು ಮಾನಸಿಕ ತೊಳಲಾಟಗಳನ್ನು ಲೇಖಕಿ ಅತ್ಯಂತ ಸಮರ್ಥವಾಗಿ ಮೂಡಿಸಿದ್ದಾರೆ. ಹೊರಜ ಗತ್ತಿನ ಯಾವ ಗೌಜು ಗಲಾಟೆಯನ್ನು ಅರಿಯದ ಆ ವಿಕಲಾಂಗ ದೇಹದ ಮುದ್ದು ಮಗು, ಈ ಸಂಕಲನದಲ್ಲಿ ಕತೆಗಾರ್ತಿ ಸೃಷ್ಟಿಸಿದ ಅತ್ಯಂತ ದುರಂತ ಪಾತ್ರ. ಮಧ್ಯಮ ವರ್ಗದ ಇನ್ನೊಂದು ವಿಶಿಷ್ಟ ಕತೆಯಾದ ‘ಮಡಿಲು ಬೇನೆಯ ಕೂಗು’-ಸೀತಾಬಾಯಿ ಮತ್ತು ಮಗಳು ಅನುಪಮ ಈ ಇಬ್ಬರು ಪಾತ್ರಗಳು ವಾಸ್ತವದ ಬತ್ತಳಿಕೆಯಲ್ಲಿರುವಂತಹವೇ! ಮೇಲ್ನೋಟಕ್ಕೆ ಈ ಕತೆ ವಾಸ್ತವತೆಗೆ ಹತ್ತಿರದಂತೆ ಕಂಡರೂ ಅದರ ಅಂತ್ಯ ಮತ್ತೆ ನಮ್ಮನ್ನು ನೋವಿಗೀಡು ಮಾಡುತ್ತದೆ. ಬೇಜ ವಾಬ್ದಾರಿ ಮಗ ಮದುವೆಯಾದ ಮೇಲೆ ತಾನು ನಡೆದು ಬಂದ ದಾರಿಯನ್ನು ಮರೆತು ತಾಯಿ ಮತ್ತು ತಂಗಿಯ ಕಡೆಗೆ ಲಕ್ಷ್ಯವಹಿಸದೇ ಕೊನೆಗೆ ತನ್ನ ತಂಗಿಯನ್ನು ಅನಿವಾರ್ಯವಾಗಿ ಆಕೆಗಿಂತಲೂ ಹಿರಿಯ ವಯಸ್ಸಿನವನ ಜೊತೆ ಮದುವೆ ಮಾಡಿಕೊಡುವ ಕಷ್ಟದಲ್ಲಿ ಸಿಲುಕಿದಾಗಲೂ ಆತ ತೋರುವ ನಿರ್ಲಿಪ್ತ ಭಾವ ಮತ್ತು ತಾಯಿಗೆ ಅಳಿಯನ ನೈಜಸ್ಥಿತಿ ಕೊನೆಯಲ್ಲಿ ಅರಿವಾದಾಗ ಆಕೆ ಅನುಭವಿಸುವ ನೋವು ಹೇಳತೀರದು.  ಸೂತ್ರ ತಪ್ಪಿದ ಗಾಳಿಪಟದಂತೆ ಒಬ್ಬನ ಬದುಕು ಊರು ಬಿಟ್ಟು ನಗರ ಸೇರಿ ಅಲ್ಲಿಂದ ತಾನು ಮಾಡದ ತಪ್ಪಿಗೆ ನೋವನ್ನು ಅನುಭವಿಸುತ್ತಾ ಜೀವನದ ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುವವನ ಮನಸ್ಥಿತಿ ಹೇಗಿರುತ್ತದೆ ಅನ್ನುವುದು ‘ಸಾವಿನ ನೆರಳು’ ಕತೆಯಲ್ಲಿ ಕಾಣುತ್ತದೆ.

ಈ ಸಂಕಲನದ ಬಹುತೇಕ ಕತೆಗಳು ವಾಸ್ತವ ಬದುಕಿನ ಕ್ರೂರತೆ ಯನ್ನು ಬಿಚ್ಚುತ್ತಾ ಸಾಗುತ್ತವೆ. ಮಾನವ ಸ್ವಭಾವದಲ್ಲಿ ರಕ್ತಗತವಾಗಿ ಬಂದಂತಹ ಕೆಟ್ಟಗುಣಗಳನ್ನು ಅನಾವರಣ ಮಾಡುತ್ತಾ ಬದುಕಿನ ಸಹಜ ಹೋರಾಟವನ್ನು ಮನವರಿಕೆ ಮಾಡು ತ್ತವೆ. ಎಲ್ಲ ಕತೆಗಳ ಪಾತ್ರಗಳು ವಾಸ್ತವಕ್ಕೆ ತುಂಬಾ ಹತ್ತಿರದಲ್ಲಿವೆ. ನಮ್ಮ ಸುತ್ತಲೂ ಇವರು ಇದ್ದಾರೋ ಏನೋ? ನಾವು ಕಂಡಿ ದ್ದೇವೋ ಏನೋ? ಅನ್ನುವಂತೆ ರೂಪಿತ ಗೊಂಡಿವೆ. ಅದರಲ್ಲೂ ಮುಖ್ಯವಾಗಿ ಸ್ತ್ರೀ ಸಂವೇದನೆಯ ಅಂಶ ಗಳನ್ನು ಅತ್ಯಂತ ಸೂಕ್ಷ್ಮ ವಾಗಿ ಮೂಡಿಸಿ ಕತೆಗಳ ಆಳವನ್ನು ಇನ್ನಷ್ಟು ವಿಸ್ತಾರ ಮಾಡಿರುವುದು ಈ ಸಂಕಲನದ ವಿಶೇಷ. ‘ಪರಿಧಿಯನ್ನು ಅರಸುತ್ತಾ’, ಉಲ್ಲಂಘನೆ’, ‘ಅಪವರ್ಗಿ ನಾನಲ’್ಲ, ‘ಸಪ್ತಪದಿ’ ಯಂತಹ ಕತೆಗಳು ನಮ್ಮ ಸಾಂಪ್ರದಾಯಿಕ ಕೌಟುಂಬಿಕ ಚೌಕಟ್ಟಿನೊಳಗೆ ರೂಪು ಗೊಂಡು, ಇದರೊಳಗೆ ಸಂಬಂಧಗಳ ಒಳಸುಳಿ, ಅದರೊಳಗಿನ ನೋವು ಗಳನ್ನು ಬಿತ್ತರಿಸುವ ಕತೆಗಳನ್ನು ಓದಿದಷ್ಟು ಒಳಗಿನ ಭಾವುಕತೆ ನಮ್ಮನ್ನು ಇನ್ನಷ್ಟು ಕಾಡುತ್ತದೆ. ಭಾವನೆಗಳಿಗೆ ಸಿಲುಕದೇ ಬದುಕಲು ಸಾಧ್ಯವಿಲ್ಲ ಅನ್ನುವುದನ್ನು ಕೂಡ ಕತೆಗಳು ಸ್ಪಷ್ಟಪಡಿಸುತ್ತವೆ.

ಲೇಖಕಿ ತಾರಾಭಟ್ ಒಬ್ಬ ಹಿರಿಯ ಲೇಖಕಿಯಾಗಿ ತಮ್ಮ ಸುದೀರ್ಘ ಜೀವನಾನುಭವದ ದೃಷ್ಟಿಯಿಂದ ತಾವು ಕಂಡಂತಹ ಪಾತ್ರಗಳನ್ನು ಕಥೆಯ ರೂಪಕವಾಗಿ ಬಳಸಿಕೊಂಡಿದ್ದಾರೆ ಎಂಬುದನ್ನು ನಾನು ನಂಬುತ್ತೇನೆ. ಅವರ ಜೀವನದ ದೃಷ್ಟಿಕೋನ, ಸಂವೇದನೆ ಪ್ರತಿ ಕತೆಗಳಲ್ಲಿಯೂ ನಮಗೆ ಕಾಣುತ್ತದೆ. ಅತ್ಯಂತ ಕ್ಲಿಷ್ಟಕರ, ಗಂಭೀರ ವಿವರಣೆ, ರೂಪಾಂತರಗಳ ಪ್ರಯೋಗಕ್ಕೆ ಹೋಗದೇ ಅತ್ಯಂತ ಸರಳವಾಗಿಯೂ ಕಥೆಗಳನ್ನು ಬರೆದು ಮುಗಿಸಿರುವುದು ಅವರ ಬರವಣಿಗೆಯ ಅನುಭವದ ಲಕ್ಷಣವಾಗಿದೆ. ಇವರ ಕತೆಗಳನ್ನು ಓದುತ್ತಾ ಹೋದಂತೆ ಒಮ್ಮಾಮ್ಮೆ ಭಾವುಕತೆಗೆ ಈಡಾದರೂ ಕತೆಗಾರ್ತಿಯ ಸೂಕ್ಷ್ಮಸಂವೇದನೆ, ಮಾತೃಕರುಣೆಯಂತಹ ಹೃದಯ, ಮಗುವಿನಂತಹ ಮನಸು ನಮ್ಮನ್ನು ನೆನಪಿಸದೇ ಇರದು. ಒಬ್ಬ ಲೇಖಕನ ವ್ಯಕ್ತಿತ್ವ ಪರಿಪೂರ್ಣ ತೆಯತ್ತ ಸಾಗುತ್ತಾ ಹೋದಂತೆ ಆತನ ಸಾಹಿತ್ಯವೂ ಕೂಡ ಅಷ್ಟೇ ಪರಿಪೂರ್ಣತೆಯನ್ನು ಸಾಧಿಸಿರುತ್ತದೆ. ಈ ಮಾತಿಗೆ ತಾರಾ ಭಟ್ ಅವರ ಈ ಸಂಕಲನ ಸಾಕ್ಷಿಯಾಗಿ ಜೀವನದ ಪರಿ ಪೂರ್ಣತೆಯನ್ನು ಕಾಣುವ ತುಡಿತವನ್ನು ಹುಟ್ಟಿಸುತ್ತದೆ.

Writer - ಶ್ರೀಧರ ಬನವಾಸಿ

contributor

Editor - ಶ್ರೀಧರ ಬನವಾಸಿ

contributor

Similar News