ಬಿಬಿಎಂಪಿ ಬಜೆಟ್ ಅನುಮೋದನೆಗೂ ತಟ್ಟಿದ ಲೋಕಸಭಾ ಚುನಾವಣಾ ನೀತಿ ಸಂಹಿತೆ

Update: 2019-03-17 17:12 GMT

ಬೆಂಗಳೂರು, ಮಾ.17: ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್‌ಗೆ ಸರಕಾರದಿಂದ ಅನುಮೋದನೆ ದೊರೆಯುವುದು ವಿಳಂಬವಾಗಲಿದೆ.

ಲೋಕಸಭಾ ಚುನಾವಣೆ ಮುಗಿಯುವವರೆಗೆ ಬಜೆಜ್‌ಗೆ ಸರಕಾರದಿಂದ ಅನುಮೋದನೆ ದೊರೆಯುವುದಿಲ್ಲ. ಹೀಗಾಗಿ, 2018-19ರಂತೆ 2019-20ರ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಪಾಲಿಕೆ ಒದ್ದಾಡಬೇಕಿದ್ದು, ಆದಾಯ ಸಂಗ್ರಹದಲ್ಲೂ ಹಿಂದೆ ಬೀಳುವ ಆತಂಕ ಎದುರಾಗಿದ್ದು, ರಾಜಧಾನಿ ಜನತೆಗೆ ಬಜೆಟ್‌ನಲ್ಲಿ ಬಿಬಿಎಂಪಿ ಘೋಷಿಸಿರುವ ಯೋಜನೆಗಳ ಅನುಷ್ಠಾನ ಈ ಬಾರಿಯೂ ವಿಳಂಬವಾಗಲಿದೆ. ಆ ಮೂಲಕ ಈ ವರ್ಷವೂ ಬಿಬಿಎಂಪಿ ಕೈಗೊಳ್ಳಬೇಕಿದ್ದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವುದು ಅನುಮಾನವಾಗಿದೆ.

ಪಾಲಿಕೆ ಪ್ರಸಕ್ತ ಸಾಲಿನಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ 12,800 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದೆ. ಬಿಬಿಎಂಪಿ ಆದಾಯಕ್ಕೂ ಬಜೆಟ್ ನಲ್ಲಿನ ವೆಚ್ಚಕ್ಕೂ ಹೋಲಿಕೆಯಾಗದಿದ್ದರೂ, ಕೌನ್ಸಿಲ್ ಸಭೆಯಲ್ಲಿ ಅನುಮೋದಿಸಿ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ, ಅನುಮೋದನೆಗೂ ಮೊದಲು ಬಜೆಟ್ ಗಾತ್ರ ಕಡಿತಗೊಳ್ಳುವ ಸಾಧ್ಯತೆಯಿದೆ. ಬಜೆಟ್ ಮಂಡನೆಗೂ, ಮೊದಲೇ ರಾಜ್ಯ ಸರಕಾರದ ಅನುದಾನ ನೆಚ್ಚಿಕೊಳ್ಳದೆ ಬಿಬಿಎಂಪಿ ಆದಾಯಕ್ಕೆ ತಕ್ಕಂತೆ ಬಜೆಟ್ ಮಂಡಿಸುವಂತೆ ನಗರಾಭಿವೃದ್ಧಿ ಇಲಾಖೆಯು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಪತ್ರ ಬರೆದಿತ್ತು.
ಆದರೂ, ಸಮಿತಿ ಅಧ್ಯಕ್ಷೆ ಹೇಮಲತಾ, ಬಜೆಟ್ ಗಾತ್ರವನ್ನು 12,800 ಕೋಟಿ ರೂ.ಗೆ ತಲುಪಿಸಿದರು. ಹೀಗಾಗಿ ಬಜೆಟ್ ಪರಿಶೀಲನೆ ನಡೆಸಲಿರುವ ನಗರಾಭಿವದ್ಧಿ ಇಲಾಖೆ, ಯಾವೆಲ್ಲ ಯೋಜನೆಗಳನ್ನು ಕಡಿತಗೊಳಿಸಬಹುದು ಎಂದು ನಿರ್ಧರಿಸಲು 1ರಿಂದ 2 ತಿಂಗಳು ಬೇಕು. ಹೀಗಾಗಿ ಸರಕಾರ ಜುಲೈ ತಿಂಗಳಲ್ಲಿ ಬಜೆಟ್‌ಗೆ ಅನುಮೋದನೆ ನೀಡಿ ಬಿಬಿಎಂಪಿಗೆ ಕಳುಹಿಸುವ ಸಾಧ್ಯತೆಗಳಿವೆ.

ಕೇವಲ ಘೋಷಣೆಗೆ ಸೀಮಿತ: ಆರ್ಥಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳ ನಂತರ ಬಜೆಟ್‌ಗೆ ಅನುಮೋದನೆ ದೊರೆತರೆ ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಕೇವಲ 8 ತಿಂಗಳ ಕಾಲಾವಕಾಶ ಸಿಗಲಿದೆ. ಹೀಗಾಗಿ ಕಾರ್ಯಕ್ರಮಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ಯೋಜನೆಗಳು ಕೇವಲ ಘೋಷಣೆಗೆ ಸೀಮಿತ ಎಂಬಂತಾಗಿವೆ.

ಕಳೆದ ಬಜೆಟ್ ಪೂರ್ಣ ಅನುಷ್ಠಾನವಿಲ್ಲ: ಕಳೆದ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆದ ಹಿನ್ನೆಲೆಯಲ್ಲಿ 2018-19ನೇ ಸಾಲಿನ ಬಿಬಿಎಂಪಿ ಬಜೆಟ್ ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡಿಲ್ಲ. ಬಜೆಟ್‌ನಲ್ಲಿನ ಯೋಜನೆಗಳಲ್ಲಿ ಅನುಷ್ಠಾನ ಗೊಳಿಸಿರುವುದು, ಚಾಲನೆ ನೀಡಿರುವ ಯೋಜನೆಗಳ ಪ್ರಮಾಣ ಶೇ.50 ಮಾತ್ರ. ಉಳಿದ ಯೋಜನೆಗಳು ಇನ್ನಷ್ಟೇ ಜಾರಿಯಾಗಬೇಕು.

ಅವಾಸ್ತವಿಕ ಬಜೆಟ್: ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಬಜೆಟ್ ಅವಾಸ್ತವಿಕವಾಗಿದೆ ಎಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ. 13 ಸಾವಿರ ಕೋಟಿ ರೂ. ಹೊಸ್ತಿಲಲ್ಲಿರುವ ಬಜೆಟ್‌ನಲ್ಲಿ ಕನಿಷ್ಠ 5 ಸಾವಿರ ಕೋಟಿ ರೂ. ಮೊತ್ತದ ಯೋಜನೆಯನ್ನು ಕಡಿತಗೊಳಿಸಬೇಕು. ಇಲ್ಲದಿದ್ದರೆ, ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ತಿಳಿಸಿದ್ದಾರೆ.

ಚುನಾವಣೆ ನೀತಿ ಸಂಹಿತೆ ಮುಗಿದ ಮೇಲೆ ಬಜೆಟ್‌ನ ಶೀಘ್ರ ಅನುಷ್ಠಾನ ಕುರಿತು ಬಿಬಿಎಂಪಿ ಮೇಯರ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೆ, ಬಿಬಿಎಂಪಿ ಬಜೆಟ್‌ನಲ್ಲಿ ಶೇ.30ರಷ್ಟು ಅನುದಾನ ಬಳಕೆಗೆ ಸರಕಾರ ಅನುಮೋದನೆ ನೀಡಲಿದೆ.
- ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News