ಸ್ಯಾಫ್ ಮಹಿಳಾ ಫುಟ್ಬಾಲ್ ಟೂರ್ನಿ: ಶ್ರೀಲಂಕಾ ಮಣಿಸಿ ಭಾರತ ಸೆಮಿಗೆ

Update: 2019-03-17 18:19 GMT

ಬೀರತ್‌ನಗರ, ಮಾ.17: ಶ್ರೀಲಂಕಾ ತಂಡವನ್ನು 5-0 ಗೋಲುಗಳ ಭಾರೀ ಅಂತರದಿಂದ ಮಣಿಸಿದ ಭಾರತ ತಂಡ ಸ್ಯಾಫ್ ಮಹಿಳಾ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ರವಿವಾರ ಇಲ್ಲಿನ ರಂಗಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಜಯದಿಂದ ಮಿನುಗಿದ ಭಾರತ, ಟೂರ್ನಿಯ ಇತಿಹಾಸದಲ್ಲಿ ಅಜೇಯ ಓಟವನ್ನು (21 ಪಂದ್ಯಗಳ ಗೆಲುವು)ಮುಂದುವರಿಸಿತು. ಈ ಗೆಲುವಿನ ಮೂಲಕ ಟೂರ್ನಿಯ ‘ಬಿ’ ಗುಂಪಿನಲ್ಲಿ ಭಾರತ ಅಗ್ರ ಸ್ಥಾನವನ್ನು ಪಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಬಾಂಗ್ಲಾದೇಶವನ್ನು ಎದುರಿಸಲಿದೆ. ಇನ್ನೊಂದೆಡೆ ಅತಿಥೇಯ ನೇಪಾಳ ತಂಡ ಶ್ರೀಲಂಕಾವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ಭಾರತದ ಪರ ದಾಖಲಾದ ಐದು ಗೋಲುಗಳು 5 ಬೇರೆ ಬೇರೆ ಆಟಗಾರ್ತಿಯರಿಂದ ದಾಖಲಾದವು. ನಾಲ್ಕು ಬಾರಿಯ ಚಾಂಪಿಯನ್ ಭಾರತದ ಪರ ನಾಲ್ಕನೇ ನಿಮಿಷದಲ್ಲಿಯೇ ಮೊದಲ ಗೋಲನ್ನು ಗ್ರೇಸ್ ಡಾಂಗ್ಮೆ ಅವರು ಸಂಜು ನೀಡಿದ ಪಾಸ್‌ನ ಪ್ರಯೋಜನ ಪಡೆದು ಹೆಡರ್ ಮೂಲಕ ಬಾರಿಸಿದರು. ಮೂರು ನಿಮಿಷಗಳ ಬಳಿಕ ಭಾರತ ತನ್ನ ಮುನ್ನಡೆಯನ್ನು ಎರಡಕ್ಕೆ ಹೆಚ್ಚಿಸಿಕೊಂಡಿತು. ಮತ್ತೆ ಸಂಜು ಅವರ ಸಹಾಯದಿಂದ ಈ ಬಾರಿ ಸಂಧ್ಯಾ ಗೋಲು ಬಾರಿಸಿದರು.

17ನೇ ನಿಮಿಷದಲ್ಲಿ ಮತ್ತೊಂದು ಗೋಲಿನ ಅವಕಾಶ ಪಡೆದಿದ್ದ ಭಾರತಕ್ಕೆ ನಿರಾಸೆ ಕಾದಿತ್ತು. ರತನ್‌ಬಾಲಾ ಮಾಡಿದ ಪ್ರಯತ್ನ ಆಫ್‌ಸೈಡ್ ಆಗಿತ್ತು. ಆಗಾಗ ಗೋಲಿನ ಪ್ರಯತ್ನ ನಡೆಸುತ್ತಿದ್ದ ಭಾರತಕ್ಕೆ ಶ್ರೀಲಂಕಾದ ಗೋಲ್‌ಕೀಪರ್ ಎರಡು ಗೋಲು ತಡೆಯುವ ಮೂಲಕ ನಿರಾಸೆಯನ್ನು ಹೆಚ್ಚಿಸುತ್ತಲೇ ಇದ್ದರು. ಭಾರತದ ನಾಯಕಿ ಸಂಜು ಮತ್ತೆ ಮಿಂಚಿದರು. ಅವರು ನೀಡಿದ ಪಾಸ್‌ನ ಲಾಭ ಪಡೆದ ಇಂದುಮತಿ 36ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 3-0 ಹೆಚ್ಚಿಸಿದರು. ಪ್ರಥಮಾರ್ಧದ ಅಂಚಿನಲ್ಲಿ ಮತ್ತೊಂದು ಗೋಲು ಸಂಗೀತಾ ಮೂಲಕ ಬಂತು. ದ್ವಿತೀಯಾರ್ಧದಲ್ಲೂ ತನ್ನ ಪ್ರಯತ್ನ ಮುಂದುವರಿಸಿದ ಭಾರತಕ್ಕೆ ರತನ್‌ಬಾಲಾ ಮೂಲಕ ಐದನೇ ಗೋಲು ಸಂದಾಯವಾಯಿತು.

ತನ್ನ ಮೊದಲ ಪಂದ್ಯದಲ್ಲಿ ಮಾಲ್ಡಿವ್ಸ್ ತಂಡವನ್ನು ಭಾರತ 6-0 ಗೋಲುಗಳಿಂದ ಮಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News