ಗೋವಾ ಸಿಎಂ ಆಯ್ಕೆಗೆ ರಾತ್ರಿಯಿಡೀ ಬಿಜೆಪಿ ಕಸರತ್ತು

Update: 2019-03-18 04:21 GMT

ಪಣಜಿ, ಮಾ. 18: ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ನೂತನ ಸಿಎಂ ಆಯ್ಕೆಗೆ ಬಿಜೆಪಿ ರವಿವಾರ ರಾತ್ರಿಯಿಡೀ ಕಸರತ್ತು ಮಾಡಿದ್ದರೂ, ನಿರ್ಧಾರಕ್ಕೆ ಬರುವುದು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಹಿರಿಯ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಪಕ್ಷದ ಶಾಸಕರು ಹಾಗೂ ಮಿತ್ರಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ.

ರವಿವಾರ ರಾತ್ರಿಯಿಡೀ ಪುಟ್ಟ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿದ್ದು, ಸ್ಪೀಕರ್ ಪ್ರಮೋದ್ ಸಾವಂತ್ ಮತ್ತು ವಿಶ್ವಜೀತ್ ರಾಣೆಯವರು ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಗಳು. ಎಂಜಿಪಿ ಮುಖಂಡ ರಾಮಕೃಷ್ಣ ಧವ್ಳೀಕರ್ ಕೂಡಾ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದ್ದಾರೆ ಎಂದು ಉಪ ಸ್ಪೀಕರ್ ಮೈಕೆಲ್ ಲೋಬೊ ಹೇಳಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ಆಯ್ಕೆ ವಿಚಾರವನ್ನು ಪಕ್ಷದ ಮುಖಂಡರಿಗೆ ಬಿಟ್ಟುಬಿಡುವಂತೆ ಮಿತ್ರಪಕ್ಷಗಳಿಗೆ ಬಿಜೆಪಿ ಸ್ಪಷ್ಟ ಸೂಚನೆ ನೀಡಿದೆ. ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್, ಬಿಜೆಪಿ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಬಿಜೆಪಿ ಮುಖಂಡರು ಮಿತ್ರಪಕ್ಷಗಳ ಮುಖಂಡರ ಜತೆ ಹಲವು ಸುತ್ತುಗಳ ಮಾತುಕತೆ ನಡೆಸಿದ್ದಾರೆ.

ಸೋಮವಾರ ಬೆಳಿಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ ಎಂದು ಮಾಜಿ ಪಂಚಾಯತ್‌ರಾಜ್ ಸಚಿವ ಮೌವಿನ್ ಗುಡ್ಹಿನೊ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಬಿಜೆಪಿಯ ಎಲ್ಲ ಶಾಸಕರು ಮತ್ತು ಕೋರ್ ಕಮಿಟಿ ಸದಸ್ಯರನ್ನು ಪಣಜಿಯ ಹೋಟೆಲ್‌ನಿಂದ ದೋನಾಪೌಲೊದಲ್ಲಿರುವ ಮತ್ತೊಂದು ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News