ವೇದಾಂತದ ಅಲ್ಯೂಮಿನಿಯಂ ಘಟಕದಲ್ಲಿ ಘರ್ಷಣೆ: ಓರ್ವ ಸಾವು

Update: 2019-03-18 17:55 GMT

 ಹೊಸದಿಲ್ಲಿ, ಮಾ. 18: ವೇದಾಂತ ಲಿಮಿಟೆಡ್‌ನ ಒಡಿಶ್ಸಾದ ಅಲ್ಯೂಮಿನಿಯಂ ಘಟಕದ ಹೊರಭಾಗದಲ್ಲಿ ಸೋಮವಾರ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆಯಲ್ಲಿ ಒರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತದ ತಾಮ್ರ ಘಟಕ ಆರಂಭಿಸುವುದರ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ 13 ಮಂದಿ ಮೃತಪಟ್ಟ ಘಟನೆ ನಡೆದ ಒಂದು ವರ್ಷದ ಒಳಗೆ ಈ ಘಟನೆ ನಡೆದಿದೆ.

ತನ್ನ ಲಂಜಿಗಢ ಘಟಕದ ಹೊರಗೆ ನಡೆದ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದಾನೆ ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ವೇದಾಂತ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ‘‘ಆಸ್ಪತ್ರೆಯ ಮಾಹಿತಿ ಪ್ರಕಾರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದವರಲ್ಲಿ ಓರ್ವ ಮೃತಪಟ್ಟಿದ್ದಾನೆ’’ ಎಂದು ವೇದಾಂತದ ಹೇಳಿಕೆ ತಿಳಿಸಿದೆ.

 ಪ್ರತಿಭಟನೆ ಸಂದರ್ಭ ಮಧ್ಯಪ್ರವೇಶಿಸಿದ ಸ್ಥಳೀಯ ಒಡಿಶಾ ಕೈಗಾರಿಕೆ ಭದ್ರತಾ ಪಡೆ (ಒಐಎಸ್‌ಎಫ್) ಸಿಬ್ಬಂದಿ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ ಪರಿಣಾಮ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವೇದಾಂತದ ಹೇಳಿಕೆ ತಿಳಿಸಿದೆ.

ಪ್ರತಿಭಟನಕಾರರ ಬೇಡಿಕೆ ಏನು ಎಂಬ ಬಗ್ಗೆ ಹೇಳಿಕೆ ನೀಡಲು ವೇದಾಂತ ನಿರಾಕರಿಸಿದೆ. ಸ್ಥಳೀಯ ಜನರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿತ್ತು ಎಂದು ಒಡಿಶ್ಶಾದ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News