ಥೀಮ್‌ಗೆ ಒಲಿದ ಇಂಡಿಯನ್ ವೆಲ್ಸ್ ಪ್ರಶಸ್ತಿ

Update: 2019-03-18 18:50 GMT

ಇಂಡಿಯನ್ ವೆಲ್ಸ್, ಮಾ.18: ಸ್ವಿಸ್ ದಂತಕತೆ ರೋಜರ್ ಫೆಡರರ್‌ಗೆ ದಾಖಲೆಯ 6ನೇ ಇಂಡಿಯನ್ ವೆಲ್ಸ್ ಪ್ರಶಸ್ತಿ ನಿರಾಕರಿಸಿದ ಅಸ್ಟ್ರಿಯದ ಡೊಮಿನಿಕ್ ಥೀಮ್ ರವಿವಾರ ರಾತ್ರಿ ಇಂಡಿಯನ್ ವೆಲ್ಸ್ ಟೆನಿಸ್‌ನ ನೂತನ ದೊರೆಯಾಗಿ ಸಂಭ್ರಮಿಸಿದ್ದಾರೆ. ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಫೆಡರರ್‌ಗೆ ಥೀಮ್ 3-6, 6-3, 7-5 ಸೆಟ್‌ಗಳ ಸೋಲುಣಿಸಿದರು. ಇದು ಥೀಮ್‌ರ ಎಟಿಪಿ ಮಾಸ್ಟರ್ಸ್ 1000 ವಿಭಾಗದ ಪ್ರಥಮ ಪ್ರಶಸ್ತಿಯಾಗಿದೆ.

 ವಿಶ್ವ ರ್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ 25 ವರ್ಷದ ಥೀಮ್ ಮ್ಯಾಡ್ರಿಡ್‌ನಲ್ಲಿ ಎರಡು ಬಾರಿ ಫೈನಲ್ ತಲುಪಿ ಎಡವಿದ್ದರು. ಫೆಡರರ್ ವಿರುದ್ಧದ 5 ಪಂದ್ಯಗಳಲ್ಲಿ 3 ಬಾರಿ ಜಯ ಕಂಡಿದ್ದಾರೆ ಥೀಮ್. ಈ ಪಂದ್ಯದ ಅಂತಿಮ ಸೆಟ್‌ನ 11ನೇ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್ ಗಳಿಸಿದರು. 2 ತಾಸು 2 ನಿಮಿಷಗಳ ಅವಧಿಯಲ್ಲಿ ಪಂದ್ಯವನ್ನು ಥೀಮ್ ವಶಪಡಿಸಿಕೊಂಡರು. ಫೆಡರರ್ ಸತತ ಎರಡನೇ ಬಾರಿ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. 2018ರಲ್ಲಿಯೂ ಅವರು ಫೈನಲ್ ತಲುಪಿ ಅರ್ಜೆಂಟೀನದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊಗೆ ಮಣಿದಿದ್ದರು.

1997ರಲ್ಲಿ ಥಾಮಸ್ ಮಸ್ಟರ್ ಮಿಯಾಮಿಯಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಅಸ್ಟ್ರಿಯದ ಆಟಗಾರನೊಬ್ಬ ಪಡೆದ ಪ್ರಥಮ ಎಟಿಪಿ 1000 ವಿಭಾಗದ ಪ್ರಶಸ್ತಿ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News