ತಡರಾತ್ರಿ 2 ಗಂಟೆಗೆ ಗೋವಾ ಹೊಸ ಸಿಎಂ ಪ್ರಮಾಣ!

Update: 2019-03-19 03:25 GMT

ಪಣಜಿ, ಮಾ.19: ಬಿಜೆಪಿ ಮುಖಂಡ ಪ್ರಮೋದ್ ಸಾವಂತ್ ಮಧ್ಯರಾತ್ರಿಯ ಬಳಿಕ 2 ಗಂಟೆಗೆ ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸೋಮವಾರ ದಿನವಿಡೀ ನಡೆದ ರಾಜಕೀಯ ಕಸರತ್ತಿನ ಬಳಿಕ ಮಿತ್ರಪಕ್ಷಗಳನ್ನು ಜತೆಗೆ ಒಯ್ಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅಸಮಾಧಾನಗೊಂಡ ಮಿತ್ರ ಪಕ್ಷಗಳನ್ನು ಸಮಾಧಾನಿಸುವ ಪ್ರಯತ್ನವಾಗಿ ಪುಟ್ಟ ರಾಜ್ಯಕ್ಕೆ ಇಬ್ಬರು ಉಪಮುಖ್ಯಮಂತ್ರಿಗಳನ್ನು ನಿಯೋಜಿಸಲಾಗಿದೆ. 11 ಸಚಿವರು ಈ ಸಂದರ್ಭ ಪ್ರಮಾಣ ವಚನ ಸ್ವೀಕರಿಸಿದರು.

ಕೇಂದ್ರದ ಮಾಜಿ ರಕ್ಷಣಾ ಸಚಿವ ಹಾಗೂ ನಾಲ್ಕು ಬಾರಿಯ ಗೋವಾ ಸಿಎಂ ಮನೋಹರ ಪಾರಿಕ್ಕರ್ ಅವರ ಅಂತ್ಯಸಂಸ್ಕಾರ ಸೋಮವಾರ ಮಿರಾಮರ್ ಬೀಚ್ ಬಳಿ ನಡೆದ ಬೆನ್ನಲ್ಲೇ ಸಾವಂತ್ (45) ನೂತನ ಮುಖ್ಯಮಂತ್ರಿಯಾಗಿ ಪಕ್ಷದಿಂದ ನಿಯೋಜಿತರಾದರು.

ಕಾಂಗ್ರೆಸ್ ಕೂಡಾ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಿ ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಪುಟ್ಟ ರಾಜ್ಯದಲ್ಲಿ ಬಿರುಸಿನ ಚಟುವಟಿಕೆಗಳು ದಿನವಿಡೀ ನಡೆದಿದ್ದವು. ಸೋಮವಾರ ರಾತ್ರಿ 11 ಗಂಟೆಗೆ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸುವುದು ನಿಗದಿಯಾಗಿತ್ತು. ಆದರೆ ಮಿತ್ರಪಕ್ಷಗಳು ತಮ್ಮ ಪಾಲಿಗೆ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ 2 ಗಂಟೆಗೆ ಇದನ್ನು ಮುಂದೂಡಲಾಯಿತು.

ಮಿತ್ರ ಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ ಮುಖ್ಯಸ್ಥ ವಿಜಯ್ ಸರದೇಸಾಯಿ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಶಾಸಕ ಸುದಿನ್ ಧವಳೀಕರ್ ಅವರನ್ನು ಉಪಮುಖ್ಯಮಂತ್ರಿಗಳಾಗಿ ನೇಮಿಸಲಾಯಿತು. ಇವರನ್ನು ಹೊರತುಪಡಿಸಿ ಒಂಬತ್ತು ಮಂದಿ ಸಚಿವರು ಕೂಡಾ ಪ್ರಮಾಣವಚನ ಸ್ವೀಕರಿಸಿದರು.

ಒಂಬತ್ತು ಮಂದಿ ಸಚಿವರೆಂದರೆ ಮನೋಹರ ಅಜಗಾಂವ್ಕರ್, ರೋಹನ್ ಖೌಂಟೆ, ಗೋವಿಂದ್ ಗೌಡ್, ವಿನೋದ್ ಪಳೀಂಕರ್, ಜಯೇಶ್ ಸಲಗಾಂವ್ಕರ್, ಮೌವಿನ್ ಗೊಡಿನ್ಹೊ, ವಿಶ್ವಜೀತ್ ರಾಣೆ, ಮಿಲಿಂದ್ ನಾಯಕ್ ಮತ್ತು ನೀರೇಶ್ ಕಾರ್ಬಲ್. ಹೊಸ ಸ್ಪೀಕರ್ ಆಯ್ಕೆವರೆಗೆ ಹಾಲಿ ಉಪಸ್ಪೀಕರ್ ಆಗಿರುವ ಮೈಕೆಲ್ ಲೋಬೊ ಸ್ಪೀಕರ್ ಆಗಿರುತ್ತಾರೆ.

ಮಧ್ಯರಾತ್ರಿ ಮಿತ್ರ ಪಕ್ಷಗಳ ಜತೆ ಒಪ್ಪಂದಕ್ಕೆ ಬಂದ ಬಳಿಕ ಸಾವಂತ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಿದರು. ಇದಕ್ಕೂ ಮುನ್ನ ಪಾರಿಕ್ಕರ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಬಳಿಕ ಬಿಜೆಪಿ ಶಾಸಕಾಂಗ ಪಕ್ಷ ಸಾವಂತ್ ಅವರನ್ನು ಮುಖಂಡರನ್ನಾಗಿ ಆಯ್ಕೆ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News