ವಿಶೇಷ ಒಲಿಂಪಿಕ್ಸ್: ಮನೆ ಕೆಲಸದಾಕೆಯ ಮಗಳು ಸಬಿತಾಗೆ ಚಿನ್ನ, ಬೆಳ್ಳಿ

Update: 2019-03-19 06:27 GMT

 ಅಬುಧಾಬಿ, ಮಾ.19: ಸ್ಪೆಷಲ್ ಒಲಿಂಪಿಕ್ಸ್ ವಿಶ್ವ ಗೇಮ್ಸ್‌ನಲ್ಲಿ ಮನೆ ಕೆಲಸದಾಕೆಯ ಮಗಳು ಸಬಿತಾ ಯಾದವ್ ಟೇಬಲ್ ಟೆನಿಸ್‌ನ ಸಿಂಗಲ್ಸ್‌ನಲ್ಲಿ ಚಿನ್ನ ಹಾಗೂ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಗಮನ ಸೆಳೆದಿದ್ದಾರೆ.

17ರ ಹರೆಯದ ಸಬಿತಾ ಬೌದ್ಧಿಕ ಅಸಾಮರ್ಥ್ಯ ಹಾಗೂ ಸರಾಗವಾಗಿ ಮಾತನಾಡಲು ಸಾಧ್ಯವಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ತಾನು ಪದಕ ಗೆದ್ದ ಸಿಹಿ ಸುದ್ದಿಯನ್ನು ಆದಷ್ಟು ಬೇಗ ತಾಯಿಗೆ ತಲುಪಿಸಿ ಅವರ ಕೈಗೆ ಪದಕ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

‘‘ನನಗೆ ತಂದೆಯಿಲ್ಲ. ನನ್ನ ತಾಯಿ ಮನೆ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ’’ ಎಂದು ಅತ್ಯಂತ ಕಡು ಬಡತನದ ಕುಟುಂಬದಿಂದ ಬಂದಿರುವ ಸಬಿತಾ ಹೇಳಿದ್ದಾರೆ.

ಕ್ರೀಡೆಯಲ್ಲಿ ಉತ್ತಮ ಸಾಧನೆಯ ನಿರೀಕ್ಷೆಯಲ್ಲಿರುವ ಸಬಿತಾ ಕುಟುಂಬ ಸ್ಥಿತಿ ಉತ್ತಮಪಡಿಸುವ ಗುರಿ ಹೊಂದಿದ್ದಾರೆ.

ಬೌದ್ಧಿಕ ಅಸಾಮರ್ಥ್ಯದ ಮಕ್ಕಳಿಗೆ ರಜಾಕಾಲದಲ್ಲಿ ತರಬೇತಿ ನೀಡುವ ವಿಶೇಷ ಶಾಲೆಗೆ ಸೇರಿಕೊಂಡ ಯಾದವ್, ಮಕ್ಕಳಿಗೆ ಹೊಲಿಯುವುದು ಹಾಗೂ ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡುವುದನ್ನು ಕಲಿಸಿಕೊಡುತ್ತಿದ್ದರು. ಯಾದವ್ 2015ರಲ್ಲಿ ಟೇಬಲ್ ಟೆನಿಸ್‌ನಲ್ಲಿ ಹೆಚ್ಚು ಗಮನ ಹರಿಸಿದರು.

‘‘ನಾನು ಸಬಿತಾರನ್ನು ಎರಡು ವರ್ಷಗಳಿಂದ ನೋಡುತ್ತಿದ್ದೇನೆ. ಆಕೆಯ ಕಠಿಣ ಶ್ರಮಕ್ಕೆ ಫಲ ಸಿಗುತ್ತಿದೆ. ಆಕೆಯ ಆತ್ಮವಿಶ್ವಾಸವೂ ಹೆಚ್ಚಾಗಿದೆ. ವಿಶೇಷ ಒಲಿಂಪಿಕ್ ಅಥ್ಲೆಟಿಕ್ಸ್‌ಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದರೆ ಮಾತ್ರ ಅಂತರ್‌ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗುತ್ತಾರೆಂದು ಕೆಲವರಿಗೆ ಗೊತ್ತಿಲ್ಲ’’ ಎಂದು ಟೇಬಲ್ ಟೆನಿಸ್ ಕೋಚ್ ಶೀತಲ್ ನೇಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News