ಬಿಸಿಲಿನ ತಾಪಕ್ಕೆ ಬರಿದಾಗುತ್ತಿರುವ ತುಂಬೆ ಡ್ಯಾಂ

Update: 2019-03-19 07:31 GMT

ಬಂಟ್ವಾಳ, ಮಾ. 18: ಉರಿ ಬಿಸಿಲಿನ ತಾಪಮಾನಕ್ಕೆ ನೇತ್ರಾವತಿ ನದಿಯ ತುಂಬೆ ಮತ್ತು ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿವೆ. ತಿಂಗಳ ಅಂತ್ಯಕ್ಕೆ ಪಶ್ಚಿಮ ಘಟ್ಟಗಳಲ್ಲಿ ಮುಂಗಾರುಪೂರ್ವ ಮಳೆಯಾಗದಿದ್ದಲ್ಲಿ ಡ್ಯಾಂನಲ್ಲಿ ನೀರಿಲ್ಲದೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಕಳೆದ ವರ್ಷ 2018 ಮಳೆಗಾಲಕ್ಕಿಂತಲೂ ಮೊದಲೇ ನದಿ ಭರ್ತಿಯಾಗಿತ್ತು. ಮೇ 21ಕ್ಕೆ ಸುರಿದ ಮಳೆಯಿಂದ ತುಂಬೆ ಡ್ಯಾಂ 6 ಮೀ. ನೀರು ತುಂಬಿಕೊಂಡು ಹೆಚ್ಚುವರಿ ನೀರು ಹೊರಗೆ ಬಿಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರ್ಚ್ ತಿಂಗಳಿಂದಲೇ ನೀರಿನ ಮಟ್ಟ ಇಳಿಕೆಯಾಗುತ್ತಿವೆ. ಬಿಸಿಲಿನ ತಾಪಕ್ಕೆ ನೀರು ಆವಿಯಾಗಿ ಇಂಚು ಲೆಕ್ಕಾಚಾರದಲ್ಲಿ ನೀರು ಕಡಿಮೆಯಾಗುತ್ತಿದೆ.

5 ಮೀ.ಗೆ ಕುಸಿದ ತುಂಬೆ ಡ್ಯಾಂ ನೀರು

ಎರಡು ವಾರಗಳ ಹಿಂದೆ 5.7 ಮೀ.ನಲ್ಲಿದ್ದ ತುಂಬೆ ಡ್ಯಾಂ ನೀರಿನ ಮಟ್ಟ ಇಂದಿಗೆ (ಮಾ.18) 5 ಮೀ.ಗೆ ಕುಸಿದಿದೆ. ಅದಲ್ಲದೆ, ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ತುಂಬೆ ಡ್ಯಾಂನಲ್ಲಿ 5.55 ಮೀ. ಸಂಗ್ರಹವಾಗಿದಲ್ಲದೆ, ಇದೇ ತಿಂಗಳಲ್ಲಿ ಸುಬ್ರಹ್ಮಣ್ಯ, ಮಲೆನಾಡು ಸಹಿತ ಕರಾವಳಿಯ ವಿವಿಧೆಡೆ ಮುಂಗಾರು ಪೂರ್ವ ಮಳೆಯಾಗಿತ್ತು. ಅದೇ ರೀತಿ ಶಂಭೂರು ಡ್ಯಾಂನಲ್ಲಿ 6 ಮೀ. (ಸಮುದ್ರಮಟ್ಟದಿಂದ 17.40 ಮೀ.) ನೀರು ಸಂಗ್ರಹವಾಗಿದೆ ಎಂದು ಡ್ಯಾಂನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಒಂದು ವೇಳೆ ನೀರನ್ನು ಸರಿಯಾಗಿ ತಮ್ಮ ಅಗತ್ಯಕಷ್ಟೇ ಸದ್ಭಳಕೆ ಮಾಡಿದ್ದೇ ಆದಲ್ಲಿ ತುಂಬೆ ಡ್ಯಾಂ ಕುಡಿಯುವ ನೀರಿನ ಸಂಗ್ರಹ ಮುಂದಿನ 40 ದಿನಗಳಿಗೆ ಲಭ್ಯವಾಗಲಿದೆ. ಅದಲ್ಲದೆ, ಶಂಭೂರು ಎಎಂಆರ್ ಡ್ಯಾಂ ನೀರಿನಿಂದ ಸುಧಾರಿಸಬಹುದು ಎನ್ನುವುದು ಅಧಿಕಾರಿ ವರ್ಗದ ಅಭಿಪ್ರಾಯ.

ಸದ್ಯ ನೀರಿನ ಲಭ್ಯತೆ ಎಷ್ಟು?

ತುಂಬೆ ಡ್ಯಾಂನಲ್ಲಿ ತಳಮಟ್ಟದ 1 ಮೀ. ನೀರು ಎತ್ತಲು ಸಾಧ್ಯವಾಗದ ಕಾರಣ ಇದೀಗ ತುಂಬೆ ಡ್ಯಾಂನಲ್ಲಿ ಸಂಗ್ರಹಗೊಂಡಿರುವ 5 ಮೀ. ನೀರಿನಲ್ಲಿ 4 ಮೀ. ಮಾತ್ರ ಬಳಕೆಗೆ ಸಿಗುತ್ತದೆ. ಅದೇ ರೀತಿ ಎಎಂಆರ್ ಡ್ಯಾಂನಲ್ಲಿ ತಳದ ಒಂದೂವರೆ ಮೀಟರ್ ನೀರು ಕೂಡ ಬಳಕೆಗೆ ದೊರೆಯುವುದಿಲ್ಲ. ಕಳೆದ ವರ್ಷ ಜಿಲ್ಲೆಯಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ನದಿಯಲ್ಲಿ ಹೂಳು ತುಂಬಿದ್ದಾಗಿ ಡ್ಯಾಂ ಸಿಬ್ಬಂದಿ ತಿಳಿಸಿದ್ದು, ಇದರಿಂದ ಎಎಂಆರ್‌ನಲ್ಲಿ 4.5 ಮೀ. ನೀರು ಬಳಕೆಗೆ ಲಭ್ಯವಾಗಲಿದೆ ಎಂಬುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಮಂಗಳೂರು ಸಹಿತ ನದಿ ದಂಡೆಯ ಸಾರ್ವಜನಿಕರಿಗೆ, ಸ್ಥಾವರಗಳಿಗೆ ಹಾಗೂ ಸಹಸ್ರಾರು ಕೃಷಿ ಭೂಮಿಗೆ ನೇತ್ರಾವತಿಯೇ ಜೀವನಾಡಿ. ತುಂಬೆ ಹಾಗೂ ಎಎಂಆರ್ ಡ್ಯಾಂಗಳನ್ನು ಹೊರತುಪಡಿಸಿ ಮೇಲ್ಗಡೆಯ ಯಾವುದೇ ಡ್ಯಾಂನಲ್ಲಿ ನೀರಿನ ಸಂಗ್ರಹವಿಲ್ಲ. ನೇತ್ರಾವತಿ ಬರಿದಾದರೆ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಬಹುದು. ಮುಂಗಾರು ಪೂರ್ವ ಮಳೆ ಬಾರದಿದ್ದರೆ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಇಂದಿನಿಂದಲೇ ನೀರನ್ನು ತಮ್ಮ ಅಗತ್ಯಕಷ್ಟೇ ಉಪಯೋಗಿಸಬೇಕಾಗಿದೆ.

ನೇತ್ರಾವತಿ ನದಿ ನೀರೆತ್ತುವ ಸ್ಥಾವರಗಳು

ಬಂಟ್ವಾಳ ಪುರಸಭೆಯ ವ್ಯಾಪ್ತಿಯ ಜಕ್ರಿಬೆಟ್ಟು ಕುಡಿಯುವ ಸಮಗ್ರ ನೀರು ಪೂರೈಕೆ 125 ಎಚ್‌ಪಿ, ನರಿಕೊಂಬು ಗ್ರಾಮ ಬೊಳಂತೂರು ಕುಡಿಯುವ ನೀರು ಉದ್ದೇಶಿತ 15 ಎಚ್‌ಪಿ ಪಂಪ್‌ಸೆಟ್ ಸಾರ್ವಜನಿಕ ಉದ್ದೇಶದ ನೀರೆತ್ತುವ ಸ್ಥಾವರಗಳಾಗಿವೆ. ಶಂಭೂರು ಎಎಂಆರ್ ಡ್ಯಾಂನಿಂದ ಮೇಲ್ಗಡೆ ಸೆಝ್ ನೀರು ಪೂರೈಕೆ 500 ಎಚ್‌ಪಿ, ಎಂಆರ್‌ಪಿಎಲ್ 500 ಎಚ್‌ಪಿಗಳ ಪಂಪ್ ನಿರಂತರವಾಗಿ ನೀರೆತ್ತುವ ಕೆಲಸ ಮಾಡುತ್ತದೆ. ಮೆಸ್ಕಾಂ ಅಂಕಿಅಂಶಗಳ ಪ್ರಕಾರದ ಮಾಹಿತಿಯಂತೆ 106 ಕಿ.ಮೀ. ಉದ್ದದ ನೇತ್ರಾವತಿ ನದಿಯಲ್ಲಿ ಕೃಷಿ ಉದ್ದೇಶಕ್ಕೆ ನೀರೆತ್ತುವ ಒಟ್ಟು 982 ವ್ಯಕ್ತಿಗತ (ಪಂಪ್‌ಸೆಟ್) ಸ್ಥಾವರಗಳಿವೆ. ನೇತ್ರಾವತಿ ನದಿ ತುಂಬೆ ಡ್ಯಾಂ ವ್ಯಾಪ್ತಿಯಲ್ಲಿ 10 ಎಚ್‌ಪಿಗಿಂತ ಕಡಿಮೆ ಅಶ್ವಶಕ್ತಿಯ ಕೃಷಿ ಉದ್ದೇಶದ 109 ಸ್ಥಾವರಗಳಿವೆ. 7 ಸಾರ್ವಜನಿಕ ಉದ್ದೇಶದ ನೀರೆತ್ತುವ ದೊಡ್ಡ ಸ್ಥಾವರಗಳಿವೆ.

ಮಾರ್ಚ್‌ನಿಂದ ಆರಂಭವಾಗಬೇಕಿದ್ದ ಬೇಸಿಗೆ ಫೆಬ್ರವರಿ ತಿಂಗಳಲ್ಲೇ ಆರಂಭವಾಗಿದೆ. ಇದರಿಂದ ಬಿಸಿಲಿನ ತಾಪಕ್ಕೆ ನೀರು ಆವಿಯಾಗಿ ಇಂಚು ಲೆಕ್ಕಾಚಾರದಲ್ಲಿ ನೀರು ಕಡಿಮೆಯಾಗುತ್ತಿದೆ. ಕಳೆದ ಬಾರಿ ನೀರಿನ ಒಳಹರಿವು ಇದ್ದಕಾರಣ ತುಂಬೆ ಡ್ಯಾಂನಿಂದ ನೀರನ್ನು ಹೊರಬಿಡಲಾಗುತ್ತಿತ್ತು. ತಾಪಮಾನ ಏರಿಕೆಯಿಂದ ಅಂತರ್ಜಲ ಹರಿವು ಶೂನ್ಯವಾಗಿದೆ. ಕೊನೆ ಹಂತದಲ್ಲಿ ಜಿಲ್ಲೆ ನೀರಿಗಾಗಿ ಪರಿತಪಿಸುವ ಗಂಭೀರ ಸ್ಥಿತಿ ಬಾರದಿರಲಿ.

 -ಹಮೀದ್ ಬ್ರಹ್ಮರಕೂಟ್ಲು, ಡ್ಯಾಂ ಸಿಬ್ಬಂದಿ

ಮುಖ್ಯಾಂಶಗಳು

►5 ಮೀ.ಗೆ ಕುಸಿದ ತುಂಬೆ ಡ್ಯಾಂ ನೀರು

►ಶಂಭೂರು ಎಎಂಆರ್ ಡ್ಯಾಂನಲ್ಲಿ 6 ಮೀ. ನೀರು

►ನದಿ ಮೇಲ್ಗಡೆಯ ಉಳಿದ ಡ್ಯಾಂಗಳಲ್ಲಿ ನೀರಿಲ್ಲ.

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News