ನ್ಯೂಝಿಲ್ಯಾಂಡ್ ನಲ್ಲಿ 350 ಮಂದಿ 'ಇಸ್ಲಾಂ ಸ್ವೀಕರಿಸಿದ' ಫೋಟೋಗಳು, ವೀಡಿಯೊ ನಕಲಿ

Update: 2019-03-19 14:22 GMT

ನ್ಯೂಝಿಲ್ಯಾಂಡ್ ನಲ್ಲಿ ಕಳೆದ ವಾರ ನಡೆದ ಸಾಮೂಹಿಕ ಹತ್ಯಾಕಾಂಡದ ಬಳಿಕ ಅಲ್ಲಿ ದೊಡ್ಡ ಸಂಖ್ಯೆಯ ಜನರು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎಂಬ ವದಂತಿ ಮಂಗಳವಾರದಿಂದ ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. 

“Did you know ? The terrorist attack in #Christchurch killed 51 Muslims, today approximately 350 people have converted/reverted back to #Islam in New Zealand. Stop fearing/hating Islam, please try to understand it.” 

( ನಿಮಗೆ ಗೊತ್ತೇ ? ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ   51 ಮುಸ್ಲಿಮರು ಬಲಿಯಾದರು. ಇಂದು ಸುಮಾರು 350 ಜನರು ನ್ಯೂಝಿಲ್ಯಾಂಡ್ ನಲ್ಲಿ ಇಸ್ಲಾಂ ಸ್ವೀಕರಿಸಿದ್ದಾರೆ. ಇಸ್ಲಾಂ ಬಗ್ಗೆ ಭಯ / ದ್ವೇಷ ಬಿಡಿ. ಅದನ್ನು ಅರ್ಥಮಾಡಿಕೊಳ್ಳಿ) ಎಂಬರ್ಥದ ಸಂದೇಶವನ್ನು ಮೊದಲು ಯುಎಇ ನಲ್ಲಿರುವ ಪತ್ರಕರ್ತೆ ಝಯ್ನ್ ಖಾನ್ ಎಂಬವರು ಟ್ವೀಟ್ ಮಾಡಿದರು. ಆ ಟ್ವೀಟ್ ನಲ್ಲಿ ಹಿಜಾಬ್ ಧರಿಸಿದ ಮಹಿಳೆಯರಿದ್ದ ಮೂರು ಚಿತ್ರಗಳಿದ್ದವು. ಅದರ ಬೆನ್ನಿಗೆ ಹಲವರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರು. ಅವು ದೊಡ್ಡ ಸಂಖ್ಯೆಯಲ್ಲಿ ಶೇರ್ ಆದವು.

Sajid Hashmat ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಇದೇ ರೀತಿ ಸಂದೇಶದ ಜೊತೆಗೆ ಒಂದು ವೀಡಿಯೊ ಹಾಕಲಾಯಿತು. ಅದೂ ಬಹುದೊಡ್ಡ ಸಂಖ್ಯೆಯಲ್ಲಿ ಶೇರ್ ಆಯಿತು. ಬಳಿಕ ವಾಟ್ಸ್ಆ್ಯಪ್ ನಲ್ಲಿ ಈ ' ಸುದ್ದಿ ' ಹರಡುತ್ತಲೇ ಹೋಯಿತು. 

ಸತ್ಯ ಏನು ? 

ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಸ್ವೀಕರಿಸಿದ್ದಾರೆ ಎಂದು ಹೇಳಿ ಹಾಕಿರುವ ವೀಡಿಯೊ ಕನಿಷ್ಟ ಹತ್ತು ವರ್ಷ ಹಳೆಯದು ಮತ್ತು ಇದಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವೇ ಇಲ್ಲದ್ದು. ಸೆಪ್ಟೆಂಬರ್  27, 2009 ರಲ್ಲಿ ಯೂಟ್ಯೂಬ್ ನಲ್ಲಿ ಹಾಕಲಾಗಿರುವ ಈ ವೀಡಿಯೊ ನಿಜವಾಗಿ 2007 ರದ್ದು ಎಂದು ಅದರಲ್ಲೇ ಹೇಳಲಾಗಿದೆ. ಇನ್ನು ಇದೇ ರೀತಿ ಶೇರ್ ಮಾಡಿಕೊಂಡಿರುವ ಫೋಟೊಗಳು ಕೂಡ ಹಲವು ವರ್ಷ ಹಳೆಯವು ಹಾಗು ಈ 'ಸುದ್ದಿಗೆ' ಯಾವುದೇ ರೀತಿಯಲ್ಲಿ ಸಂಬಂಧವೇ ಇಲ್ಲದವು.

ನ್ಯೂಝೀಲ್ಯಾಂಡ್ ರಾಷ್ಟೀಯ ರಗ್ಬಿ ತಂಡಕ್ಕಾಗಿ ರಗ್ಬಿ ಹಿಜಾಬ್ ವಿನ್ಯಾಸ ಮಾಡಿದ ಮಹಿಳೆಯದ್ದು. ಆಕೆಯ ಹೆಸರು ರೆಹನಾ ಅಲಿ ಎಂದು ಸೆಪ್ಟೆಂಬರ್ 18, 2017 ರಂದು ನ್ಯೂಝೀಲ್ಯಾಂಡ್ ವೆಬ್ ಸೈಟ್ Stuff ವರದಿ ಮಾಡಿದೆ. 

ಅಮೇರಿಕಾದ ಸೌತ್ ಕೆರೊಲಿನಾದ ಕ್ರೈಸ್ತ ಮಹಿಳೆ ನ್ಯಾನ್ಸಿ ಅಲೆನ್ ಎಂಬವರು ಮುಸ್ಲಿಂ ಮಹಿಳೆಯರು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸಿ  ಹಿಜಾಬ್ ಧರಿಸಿದ ಫೋಟೋ ಅದು. ಈ ಬಗ್ಗೆ ಅಮೇರಿಕನ್ ಪತ್ರಿಕೆ   Arkansas Democrat-Gazette ಫೆಬ್ರವರಿ  14, 2016 ರಲ್ಲಿ ವರದಿ ಮಾಡಿದೆ. 

ಈ ಫೋಟೋ ಕನಿಷ್ಟ ಸೆಪ್ಟೆಂಬರ್ 2018 ರಿಂದ ಇಂಟರ್ನೆಟ್ ನಲ್ಲಿ ಲಭ್ಯವಿದ್ದು ಮಹಿಳೆಯ ಗುರುತು ಸಿಕ್ಕಿಲ್ಲ. 

ಒಟ್ಟಾರೆ ನ್ಯೂಝೀಲ್ಯಾಂಡ್ ನಲ್ಲಿ 350 ಮಂದಿ ಇಸ್ಲಾಂ ಸ್ವೀಕರಿಸಿದ್ದಾರೆ ಎಂದು ಈವರೆಗೆ ಬರುತ್ತಿರುವ ವಿಡಿಯೋ ಹಾಗು ಫೋಟೋಗಳು ನಕಲಿ ಎಂಬುದು ಇದರಿಂದ ಸ್ಪಷ್ಟ. ಇನ್ನು ಇಷ್ಟು ಮಂದಿ ಆ ದೇಶದಲ್ಲಿ ಇತ್ತೀಚಿಗೆ  ಇಸ್ಲಾಂ ಸ್ವೀಕರಿಸಿದ ಬಗ್ಗೆಯೂ ಯಾವುದೇ ಅಧಿಕೃತ ಮೂಲಗಳಲ್ಲಿ ವರದಿಯಾಗಿಲ್ಲ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News