ದಿಲ್ಲಿಯಲ್ಲಿ ಆಪ್ - ಕಾಂಗ್ರೆಸ್ ನಡುವೆ ಚುನಾವಣಾ ಮೈತ್ರಿಗೆ ಪವಾರ್ ಪ್ರಯತ್ನ

Update: 2019-03-19 14:46 GMT

ಹೊಸದಿಲ್ಲಿ,ಮಾ.19: ಹನ್ನೆರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದಿಲ್ಲಿಯಲ್ಲಿ ಚುನಾವಣಾ ಮೈತ್ರಿಯ ಸಾಧ್ಯತೆಯನ್ನು ಆಪ್ ಮತ್ತು ಕಾಂಗ್ರೆಸ್ ಬಹಿರಂಗವಾಗಿ ನಿರಾಕರಿಸುತ್ತಿವೆಯಾದರೂ, ತೆರೆಮರೆಯಲ್ಲಿ ಅದಕ್ಕಾಗಿ ಪ್ರಯತ್ನಗಳಂತೂ ನಡೆಯುತ್ತಲೇ ಇವೆ. ಈ ಕಸರತ್ತಿನಲ್ಲಿ ಎನ್‌ಸಿಪಿ ವರಿಷ್ಠ ಶರದ್ ಪವಾರ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

 ಆಪ್ ನಾಯಕ ಸಂಜಯ ಸಿಂಗ್ ಅವರು ಮಂಗಳವಾರ ಪವಾರ್ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ನೊಂದಿಗೆ ಸ್ಥಾನಹಂಚಿಕೆ ಮತ್ತು ಪ್ರತಿಪಕ್ಷಗಳ ನಡುವೆ ಒಗ್ಗಟ್ಟು ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಮಾನ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಚರ್ಚಿಸಿದ್ದಾರೆ.

ಕಾಂಗ್ರೆಸ್ ನಾಯಕತ್ವವೂ ಆಪ್ ನಾಯಕರೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ ಮತ್ತು ಪಕ್ಷದಲ್ಲಿಯ ಹಿರಿಯ ನಾಯಕರು ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಜೊತೆಗೆ ಮೈತ್ರಿಯ ಅಗತ್ಯವನ್ನು ದಿಲ್ಲಿ ಕಾಂಗ್ರೆಸ್ ನಾಯಕರಿಗೆ ಮನದಟ್ಟು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪಕ್ಷದಲ್ಲಿನ ಮೂಲಗಳು ತಿಳಿಸಿದವು.

ಇದೇ ವೇಳೆ ಆಪ್ ನಾಯಕ ಗೋಪಾಲ ರಾಯ್ ಅವರು,ತನ್ನ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಮತ್ತು ಮೈತ್ರಿ ಮಾಡಿಕೊಳ್ಳಲು ಈಗ ತುಂಬ ವಿಳಂಬವಾಗಿದೆ ಎಂದು ಮಂಗಳವಾರ ಇಲ್ಲಿ ತಿಳಿಸಿದರು.

ಕಾಂಗ್ರೆಸ್ ಈ ಮೊದಲು ಆಪ್ ಜೊತೆ ಮೈತ್ರಿ ಮಾತುಕತೆ ವಿಫಲಗೊಂಡ ಬಳಿಕ ದಿಲ್ಲಿಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿತ್ತು.

ಆಪ್ ಜೊತೆ ಮೈತ್ರಿ ಸಾಧ್ಯತೆಗಳ ಕುರಿತು ತಾನು ದಿಲ್ಲಿಯ ಕಾಂಗ್ರೆಸ್ ನಾಯಕರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಿದ್ದೇನೆ ಎಂದು ದಿಲ್ಲಿ ಕಾಂಗ್ರೆಸ್‌ನ ಉಸ್ತುವಾರಿ ಹೊಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಸಿ.ಚಾಕೋ ಅವರು ತಿಳಿಸಿದರು. ಆದರೆ ಆಪ್ ಜೊತೆ ಮೈತ್ರಿಗೆ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ದಿಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಲೋಕಸಭಾ ಚುನಾವಣೆಗೆ ಆಪ್ ಜೊತೆ ಮೈತ್ರಿಯು ಪಕ್ಷದ ಹಿತಾಸಕ್ತಿಗಳಿಗೆ ಪೂರಕವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

 ಫೆ.13ರಂದು ಪವಾರ್ ನಿವಾಸದಲ್ಲಿ ಪ್ರತಿಪಕ್ಷ ನಾಯಕರ ಸಭೆಯ ಬಳಿಕ ಆಪ್-ಕಾಂಗ್ರೆಸ್ ಮೈತ್ರಿ ಕುರಿತು ಮಾತುಕತೆ ಚುರುಕು ಪಡೆದುಕೊಂಡಿದೆ. ಕೇಜ್ರಿವಾಲ್,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಉಪಸ್ಥಿತರಿದ್ದ ಸಭೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಮೈತ್ರಿಯ ಅಗತ್ಯವನ್ನು ಪವಾರ್ ಪ್ರಸ್ತಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News