ಉಗ್ರರೊಂದಿಗೆ ಕಾದಾಡಿದ ಕಾಶ್ಮೀರದ ಬಾಲಕ ಇರ್ಫಾನ್ ಗೆ ‘ಶೌರ್ಯಚಕ್ರ’ ಪ್ರದಾನ

Update: 2019-03-19 16:03 GMT

ಹೊಸದಿಲ್ಲಿ,ಮಾ.19: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿನ ತನ್ನ ನಿವಾಸದ ಮೇಲೆ ದಾಳಿಯಿಟ್ಟಿದ್ದ ಉಗ್ರರೊಂದಿಗೆ ಕಾದಾಡಿ ಹಿವ್ಮೆುಟ್ಟಿಸಿದ್ದ ಇರ್ಫಾನ್ ರಮಝಾನ್ ಶೇಖ್‌ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ‘ಶೌರ್ಯಚಕ್ರ’ ಪ್ರಶಸ್ತಿಯನ್ನು ಪ್ರದಾನಿಸಿ ಸನ್ಮಾನಿಸಿದರು.

‘ಶೌರ್ಯಚಕ್ರ’ವನ್ನು ಸಾಮಾನ್ಯವಾಗಿ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಪರಾಕ್ರಮಿ ಸಿಬ್ಬಂದಿಗಳಿಗೆ ನೀಡಲಾಗುತ್ತದೆ.

2017-ಅ.16-17ರ ರಾತ್ರಿ ಉಗ್ರರ ಗುಂಪೊಂದು ಶೇಖ್ ನಿವಾಸಕ್ಕೆ ಮುತ್ತಿಗೆ ಹಾಕಿತ್ತು. ಶೇಖ್ ತಂದೆ ಮುಹಮ್ಮದ್ ರಮಝಾನ್ ಅವರು ಮಾಜಿ ಸರಪಂಚರಾಗಿದ್ದು,ಪಿಡಿಪಿ ಬೆಂಬಲಿಗರಾಗಿದ್ದರು.

ಮುಹಮ್ಮದ್ ರಮಝಾನ್‌ರ ಹಿರಿಯ ಮಗ ಶೇಖ್ ಬಾಗಿಲು ತೆರೆದಾಗ ಬಾಲ್ಕನಿಯಲ್ಲಿ ರೈಫಲ್‌ಗಳು ಮತ್ತು ಗ್ರೆನೇಡ್‌ಗಳಿಂದ ಸಜ್ಜಿತರಾಗಿದ್ದ ಮೂವರು ಉಗ್ರರು ಇರುವುದು ಕಣ್ಣಿಗೆ ಬಿದ್ದಿತ್ತು.

ಉಗ್ರರು ತನ್ನ ಕುಟುಂಬಕ್ಕೆ ಹಾನಿಯನ್ನುಂಟು ಮಾಡಬಹುದು ಎಂದು ಗ್ರಹಿಸಿದ್ದ ಶೇಖ್ ಅಸಾಮಾನ್ಯ ಧೈರ್ಯವನ್ನು ಪ್ರದರ್ಶಿಸಿ ಕೆಲಕಾಲ ಅವರು ಮನೆಯನ್ನು ಪ್ರವೇಶಿಸದಂತೆ ತಡೆದಿದ್ದ. ತನ್ಮಧ್ಯೆ ಮುಹಮ್ಮದ್ ರಮಝಾನ್ ಹೊರಗೆ ಬಂದಿದ್ದು,ಉಗ್ರರು ಅವರ ಮೇಲೆ ಮುಗಿಬಿದ್ದಿದ್ದರು ಮತ್ತು ಹೊಡೆದಾಟವೂ ನಡೆದಿತ್ತು. ತನ್ನ ಸುರಕ್ಷತೆಯ ಬಗ್ಗೆ ಎಳ್ಳಷ್ಟೂ ಚಿಂತಿಸದೆ ಶೇಖ್ ತನ್ನ ಕುಟುಂಬ ಸದಸ್ಯರ ಜೀವಗಳನ್ನು ಉಳಿಸಲು ಅವರ ಮೇಲೆ ಮುಗಿಬಿದ್ದಿದ್ದ. ಉಗ್ರರು ಯದ್ವಾತದ್ವಾ ಗುಂಡುಗಳನ್ನು ಹಾರಿಸಿದ್ದು,ತೀವ್ರವಾಗಿ ಗಾಯಗೊಂಡಿದ್ದ ಮುಹಮ್ಮದ್ ರಮಝಾನ್ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಧೈರ್ಯವನ್ನು ಕಳೆದುಕೊಳ್ಳದ ಶೇಖ್ ಗುಂಡಿನ ಮಳೆಗರೆಯುತ್ತ್ತಿದ್ದ ಉಗ್ರರ ಪೈಕಿ ಓರ್ವನೊಂದಿಗೆ ಕಾದಾಟದಲ್ಲಿ ತೊಡಗಿದ್ದ. ಈ ವೇಳೆ ಉಗ್ರನಿಗೂ ಗಂಭೀರ ಗಾಯಗಳಾಗಿದ್ದವು.

ತಮ್ಮ ಸಹಚರ ಗಾಯಗೊಂಡಿದ್ದನ್ನು ಕಂಡ ಉಗ್ರರು ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಶೇಖ್ ಬೆನ್ನಟ್ಟ್ಟಿದಾಗ ಅವರು ಗಾಯಾಳು ಉಗ್ರನನ್ನು ಅಲ್ಲಿಯೇ ಬಿಟ್ಟು ಕಾಲಿಗೆ ಬುದ್ಧಿ ಹೇಳಿದ್ದರು.

ಹತ್ತನೇ ತರಗತಿಯಲ್ಲಿ ಓದುತ್ತಿರುವ ಶೇಖ್ ಮುಂದೆ ಐಪಿಎಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News