ತುರ್ತು ಸಭೆ ನಡೆಸುವಂತೆ ನಾಗರಿಕ ವಾಯುಯಾನ ಇಲಾಖೆ ಕಾರ್ಯದರ್ಶಿಗೆ ಸಚಿವ ಸುರೇಶ್ ಪ್ರಭು ಸೂಚನೆ

Update: 2019-03-19 17:09 GMT

ಮುಂಬೈ, ಮಾ. 19: ಜೆಟ್ ಏರ್‌ವೇಸ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿರುವುದು ಸೇರಿದಂತೆ ವೈಮಾನಿಕ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲು ತುರ್ತು ಸಭೆ ನಡೆಸುವಂತೆ ನಾಗರಿಕ ವಾಯು ಯಾನ ಸಚಿವ ಸುರೇಶ್ ಪ್ರಭು ಬುಧವಾರ ಕರೆ ನೀಡಿದ್ದಾರೆ.

 ಜೆಟ್ ಏರ್‌ವೇಸ್‌ನ ವಿವಾದ, ವಿಮಾನಗಳ ಹಾರಾಟ ರದ್ದು, ಮರು ಪಾವತಿ ವಿಳಂಬ ಹಾಗೂ ಸುರಕ್ಷಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲು ತುರ್ತು ಸಭೆ ನಡೆಸುವಂತೆ ನಾಗರಿಕ ವಾಯು ಯಾನ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಪ್ರಭು ಟ್ವೀಟ್‌ನಲ್ಲಿ ಹೇಳಿದ್ದಾರೆ. ಅನುಸರಣೆ ಬಗ್ಗೆ ನಾಗರಿಕ ವಾಯು ಯಾನದ ಜಾರಿ ನಿರ್ದೇಶನಾಲ ಯದಿಂದ (ಡಿಜಿಸಿಎ) ಕೂಡಲೇ ವರದಿ ಪಡೆಯವಂತೆ ನಾಗರಿಕ ವಾಯು ಯಾನ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವೇತನ ಪಾವತಿಸದೇ ಇರುವುದು ಸಿಬ್ಬಂದಿ ಮಾನಸಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದು ಏರ್‌ಲೈನ್ಸ್‌ನ ವಿಮಾನಗಳ ಹಾರಾಟದ ಸುರಕ್ಷೆಯನ್ನು ಅಪಾಯಕ್ಕೆ ಈಡು ಮಾಡಿದೆ ಎಂದು ಜೆಟ್ ಏರ್‌ವೇಸ್ ಏರ್‌ಕ್ರಾಪ್ಟ್ ನಿರ್ವಹಣಾ ಎಂಜಿನಿಯರ್ಸ್‌ ಅಸೋಶಿಯೇಶನ್ (ಜೆಎಎಂಇಡಬ್ಲುಎ) ನಾಗರಿಕ ವಾಯು ಯಾನದ ಜಾರಿ ನಿರ್ದೇಶನಾಲಯ (ಡಿಜಿಸಿಎ)ಕ್ಕೆ ಪತ್ರ ಬರೆದಿದೆ. 100 ವಿಮಾನಗಳನ್ನು ನಿರ್ವಹಿಸಲು ಜೆಟ್ ಏರ್‌ವೇಸ್ 560 ಎಂಜಿನಿಯರ್ಸ್‌ಗಳನ್ನು ಒಳಗೊಂಡಿದೆ. ಜೆಎಎಂಇಡಬ್ಲುಎ ಸುಮಾರು 490 ಎಂಜಿನಿಯರ್‌ಗಳನ್ನು ಪ್ರತಿನಿಧಿಸುತ್ತದೆ. ಪ್ರಸ್ತುತ ನಮಗೆ ಮೂರು ತಿಂಗಳ ವೇತನ ಪಾವತಿಗೆ ಬಾಕಿ ಇದೆ ಎಂದು ಸಂಘಟನೆ ಡಿಜಿಸಿಎಗೆ ಬರೆದ ಇಮೇಲ್‌ನಲ್ಲಿ ತಿಳಿಸಿದೆ.

 ‘‘ಇದರಿಂದ ನಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕೆಲಸದಲ್ಲಿ ಎಂಜಿನಿಯರ್‌ಗಳ ಮಾನಸಿಕ ಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಇದರಿಂದ ಜೆಟ್‌ವೇ ನಡೆಸುತ್ತಿರುವ ಸಾರ್ವಜನಿಕ ಹಾರಾಟದ ಸುರಕ್ಷೆ ಅಪಾಯದಲ್ಲಿದೆ’’ ಎಂದು ಇಮೇಲ್‌ನಲ್ಲಿ ಹೇಳಲಾಗಿದೆ. ಅನುಕಂಪೆ ತೋರಿ ಮಧ್ಯೆಪ್ರವೇಶಿಸುವಂತೆ, ಬಾಕಿ ಇರುವುದನ್ನು ಪಾವತಿಸಲು ನಿರ್ದೇಶಿಸುವಂತೆ ಹಾಗೂ ಸುರಕ್ಷಿತ ವಿಮಾನ ಸಂಚಾರ ಸೇವೆ ಒದಗಿಸಲು ಸಾಧ್ಯವಾಗುವಂತೆ ಸರಿಯಾದ ಸಮಯಕ್ಕೆ ವೇತನ ಪಾವತಿಸುವಂತೆ ಜೆಎಎಂಇಡಬ್ಲುಎ ತನ್ನ ಮಾರ್ಚ್ 18ರ ದಿನಾಂಕದ ಪತ್ರದಲ್ಲಿ ಹೇಳಿತ್ತು. ಪತ್ರದ ಪ್ರತಿಯನ್ನು ಪ್ರಧಾನಿ ಕಚೇರಿ, ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು ಹಾಗೂ ಸಚಿವಾಲಯದ ಕಾರ್ಯದರ್ಶಿಗೆ ಸಂಘಟನೆ ಇ ಮೇಲ್ ಮಾಡಿತ್ತು. ಜೆಟ್ ಏರ್‌ವೇಸ್‌ನ ಎಂಜಿನಿಯರ್, ಪೈಲೆಟ್ ಹಾಗೂ ಹಿರಿಯ ಆಡಳಿತಾಧಿಕಾರಿಗಳಿಗೆ ಡಿಸೆಂಬರ್ ತಿಂಗಳ ಶೇ. 87.5 ವೇತನ ಬಾಕಿ, ಅಲ್ಲದೆ ಜನನವರಿ ಹಾಗೂ ಫೆಬ್ರವರಿ ವೇತನ ಪಾವತಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News