ವೈದ್ಯರನ್ನು ಬ್ಲ್ಯಾಕ್‌ಮೇಲ್ ಮಾಡಿದ ಆರೋಪ: ಸುದ್ದಿವಾಹಿನಿಯ ಇನ್ ಪುಟ್ ಮುಖ್ಯಸ್ಥ ಹೇಮಂತ್ ಕಶ್ಯಪ್‌ ಬಂಧನ

Update: 2019-03-20 11:27 GMT

ಬೆಂಗಳೂರು, ಮಾ. 20: 'ಪಬ್ಲಿಕ್‌ ಟಿ.ವಿ' ಸುದ್ದಿವಾಹಿನಿಯ ಇನ್ ಪುಟ್ ವಿಭಾಗದ ಮುಖ್ಯಸ್ಥ ಹೇಮಂತ್ ಕಶ್ಯಪ್‌ನನ್ನು ಸದಾಶಿವನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಡಾ. ರಮಣ್‌ ರಾವ್‌ ಎಂಬವರನ್ನು ಬ್ಲ್ಯಾಕ್‌ಮೇಲ್ ಮಾಡಿ 5 ಲಕ್ಷ ರೂ. ಪಡೆದುಕೊಂಡು ಮತ್ತೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವೈದ್ಯರ ಖಾಸಗಿ ವೀಡಿಯೊ ತನ್ನ ಬಳಿ ಇರುವುದಾಗಿ ಹೇಳಿದ್ದ ಹೇಮಂತ್, ಹಣ ಕೊಡದಿದ್ದರೆ ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದ ಎನ್ನಲಾಗಿದ್ದು, ಆ ಸಂಬಂಧ ರಮಣ್‌ ರಾವ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಣ ತೆಗೆದುಕೊಂಡು ಹೋಗಲು ಬಂದಿದ್ದ ವೇಳೆಯಲ್ಲೇ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ

‘ರಾಜ್‌ಕುಮಾರ್‌ ಅವರ ಕುಟುಂಬದ ವೈದ್ಯರೂ ಆಗಿರುವ ರಮಣ ರಾವ್‌, ಸದಾಶಿವನಗರದಲ್ಲಿ ನರ್ಸಿಂಗ್‌ ಹೋಮ್ ನಡೆಸುತ್ತಿದ್ದಾರೆ. ಅವರ ಬಳಿಯಿಂದ ಆರೋಪಿ ಹೇಮಂತ್, 5 ಲಕ್ಷ ರೂ. ಪಡೆದುಕೊಂಡಿದ್ದ ದೃಶ್ಯ ನರ್ಸಿಂಗ್‌ ಹೋಮ್‌ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ತಿಳಿದುಬಂದಿದೆ.

‘ಸಮಯ ನ್ಯೂಸ್‌’ ವರದಿಗಾರನೂ ಆರೋಪಿ

‘ಸಮಯ ನ್ಯೂಸ್’ ಸುದ್ದಿವಾಹಿನಿಯ ವರದಿಗಾರ ಮಂಜುನಾಥ್ ಎಂಬಾತ ಸಹ ವೈದ್ಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆದುಕೊಂಡಿದ್ದಾನೆ. ಆತನೂ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

ಪೊಲೀಸರಿಗೇ ಬೆದರಿಕೆ

ತನ್ನನ್ನು ಬಂಧಿಸಿದ್ದಕ್ಕಾಗಿ ಪೊಲೀಸರಿಗೇ ಆರೋಪಿ ಹೇಮಂತ್‌ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News