ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಾಂಗ್ರೆಸ್‌ಗಿಲ್ಲ: ಕೆ.ಎಸ್ ಈಶ್ವರಪ್ಪ

Update: 2019-03-20 13:08 GMT

ಬೆಂಗಳೂರು, ಮಾ.20: ಕಾಂಗ್ರೆಸ್‌ಗೆ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿಲ್ಲ. ಆದುದರಿಂದಲೇ, ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳಲು ಒಂದಾಗಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಬುಧವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಉಡಾಫೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ದೇವೇಗೌಡರು ಬಿಜೆಪಿ ಸಾಧನೆ ಎರಡು ಅಂಕಿ ದಾಟುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಮೊದಲು ಅವರು ಎರಡು ಸ್ಥಾನ ಉಳಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಬಿಜೆಪಿಯು ಈ ಲೋಕಸಭಾ ಚುನಾವಣೆಯನ್ನು ಪ್ರಮುಖವಾಗಿ ರಾಷ್ಟ್ರೀಯ ವಿಚಾರಧಾರೆ, ಕಾರ್ಯಕರ್ತರ ಸಂಘಟನೆ ಹಾಗೂ ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಎದುರಿಸಲಿದೆ. ರಾಜ್ಯದಲ್ಲಿ ಕನಿಷ್ಠ 20 ರಿಂದ 25 ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೋದಿಯನ್ನು ಕೊಲೆಗಡುಕ, ಕೋಮುವಾದಿ ಎಂದಿದ್ದರು. ಆದರೆ, ದೇಶದ ಜನತೆ ಮೋದಿಯನ್ನು ಬೆಂಬಲಿಸಿದರು. ಅಂದಿನ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಗೆದ್ದಿದ್ದು 9 ಸ್ಥಾನಗಳನ್ನು ಮಾತ್ರ ಎಂದು ಈಶ್ವರಪ್ಪ ಹೇಳಿದರು.

ಹಾಸನ ಜಿಲ್ಲೆಯಲ್ಲಿ ಎ.ಮಂಜು ಅವರನ್ನು ಕಣಕ್ಕಿಳಿಸುವ ಕುರಿತು ಎಲ್ಲ ನಾಯಕರು ಸೇರಿ ತೀರ್ಮಾನಿಸಿದ್ದಾರೆ. ಜಿಲ್ಲೆಯಲ್ಲಿ ಕೆಲ ಭಿನ್ನಾಭಿಪ್ರಾಯ ಇರುವುದು ನಿಜ. ಮಂಡ್ಯದಲ್ಲೂ ಗೆಲ್ಲುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಅವರು ತಿಳಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಯಾವೊಬ್ಬ ಕಾರ್ಯಕರ್ತರು ಭಾಗವಹಿಸಿರಲಿಲ್ಲ. ಅವರೇ ಕರೆಸಿಕೊಂಡ ಜನ ಮೋದಿ ಅವರಿಗೆ ಜೈಕಾರ ಹಾಕಿದ್ದಾರೆ. ಬಿಜೆಪಿ ಸಭೆಗಳಲ್ಲಿ ಬೇಕಾದರೆ ಘೋಷಣೆ ಕೂಗಲಿ ನಮ್ಮ ಅಭ್ಯಂತರವಿಲ್ಲ ಎಂದು ಈಶ್ವರಪ್ಪ ಹೇಳಿದರು.

ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರಚಾರದಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಇಂದಿರಾಗಾಂಧಿ ಬಂದರೂ ಖಂಡಿತ ಬಿಜೆಪಿ ಗೆಲ್ಲುತ್ತದೆ. ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಲೇಹರ್‌ ಸಿಂಗ್, ರಾಜ್ಯ ಸಹ ವಕ್ತಾರರಾದ ಎ.ಎಚ್.ಆನಂದ್, ಅನ್ವರ್ ಮಾಣಿಪ್ಪಾಡಿ, ಮಾಜಿ ಉಪಮೇಯರ್ ಎಸ್.ಹರೀಶ್ ಉಪಸ್ಥಿತರಿದ್ದರು.

ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಡಾ.ಉಮೇಶ್ ಜಾಧವ್ ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಈಗಾಗಲೇ ಸ್ವೀಕರಿಸಬೇಕಿತ್ತು. ಆದರೆ, ಏಕೆ ತಡಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ವಾಲ್ಮೀಕಿ ಬಿಟ್ಟರೆ ಇವರೇ ಮಹಾ ಮೇಧಾವಿ ರೀತಿ ಮಾತನಾಡುತ್ತಾರೆ. ಆದರೆ, ಜಾಧವ್ ರಾಜೀನಾಮೆ ಯಾಕೆ ಅಂಗೀಕಾರವಾಗುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಸ್ಪೀಕರ್ ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಲಿ.

-ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News