ಚುನಾವಣೆಗೆ ಸೈನಿಕರ ಬಳಕೆ ದೇಶದ ಇತಿಹಾಸದಲ್ಲೇ ಮೊದಲು: ರಾಮಲಿಂಗಾರೆಡ್ಡಿ

Update: 2019-03-20 13:09 GMT

ಬೆಂಗಳೂರು, ಮಾ.20: ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ದೇಶದ ಸೈನಿಕರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಇದನ್ನು ದೇಶದ ಜನತೆ ಸಹಿಸುವುದಿಲ್ಲವೆಂದು ಕೆಪಿಸಿಸಿ ಸಮನ್ವಯ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ದೇಶದ ಸೈನಿಕರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಸೈನಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಹಿಂದೇಟು ಹಾಕುವ ಮೋದಿ, ಸೈನಿಕರ ತ್ಯಾಗವನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ದೇಶದ ಜನತೆ ಸಹಿಸುವುದಿಲ್ಲವೆಂದು ಅವರು ಹೇಳಿದರು.

ರಾಹುಲ್‌ ಗಾಂಧಿ ಮಾನ್ಯತಾ ಟೆಕ್‌ಪಾರ್ಕ್ ಆಗಮನದ ವೇಳೆ ಟೆಕ್ಕಿಗಳು ರಾಹುಲ್, ರಾಹುಲ್ ಎಂದು ಘೋಷಣೆ ಕೂಗುತ್ತಿದ್ದರು. ಈ ವೇಳೆ ಟೆಕ್ಕಿಗಳ ವೇಶದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ರಾಹುಲ್ ಎಂಬ ಫ್ಲೆಕ್ಸ್‌ಗಳನ್ನು ಹಿಡಿದು ಮೋದಿ, ಮೋದಿ ಎಂದು ಕೂಗಾಟ ನಡೆಸಿದ್ದಾರೆ ಎಂದು ಆರೋಪಿಸಿದರು.

ಮಾತಿಗೆ ಮೊದಲು ಸಂಸ್ಕೃತಿಯ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ತನ್ನ ಅಭಿಮಾನಿಗಳಿಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ಸಭ್ಯತೆಯ ಬಗ್ಗೆ ಪಾಠ ಕಲಿಸಿಕೊಡಲಿ. ಒಳ್ಳೆಯ ಸಂಸ್ಕೃತಿಯನ್ನು ಹೊಂದಿರುವವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವುದಿಲ್ಲವೆಂದು ಅವರು ಹೇಳಿದರು.

ನಾನು ದೇಶದ ಕಾವಲುದಾರ ಎಂದೇಳುತ್ತಿರುವ ನರೇಂದ್ರ ಮೋದಿ, ತನ್ನ ಕಣ್ಣೆದುರೇ ಸಂಪತ್ತನ್ನು ಕೊಳ್ಳೆ ಹೊಡೆದ ಲೂಟಿಕೋರರು ದೇಶ ಬಿಟ್ಟು ಸಲೀಸಾಗಿ ಓಡಿ ಹೋದಾಗ ಮೌನ ವಹಿಸಿದ್ದಾರೆ. ಇದರ ಜೊತೆಗೆ ತಾನೇ ರಫೇಲ್ ಡೀಲ್‌ನಲ್ಲಿ ಸಿಕ್ಕಿ ಹಾಕಿಕೊಂಡ ಬಳಿಕ ಇಡೀ ದೇಶದ ಮುಗ್ಧ ಜನರನ್ನು ಚೌಕೀದಾರ್ ಮಾಡಲು ಹೊರಟಿರುವುದು ದುರಂತವೆಂದು ಅವರು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದ ಎಲ್ಲ ನಾಯಕರಿಗೆ ಚುನಾವಣೆ ಮುಗಿಯುವವರೆಗೂ ಬರೀ ಸುಳ್ಳು ಹೇಳಿ, ಸುಳ್ಳನ್ನು ಹಬ್ಬಿಸಿ ಎಂದು ಆದೇಶಿಸಿದ್ದಾರೆ. ಇವರ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಬಿಜೆಪಿ ಕಾರ್ಯಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳನ್ನು ಹಬ್ಬಿಸಲು ಮುಂದಾಗಿದ್ದಾರೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ನಕಲಿ ಐಡಿಗಳನ್ನು ಕ್ರಿಯೇಟ್ ಮಾಡಿ, ರಾಜ್ಯದಲ್ಲಿ ಕೋಮುಗಳ ಮಧ್ಯೆ ವಿಷ ಬಿತ್ತುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಪ್ರಜ್ಞಾವಂತ ನಾಗರಿಕರು ಬಿಜೆಪಿ ಸುಳ್ಳುಸುದ್ದಿಗಳಿಗೆ ಮರುಳಾಗಬಾರದು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News