ಅಲ್ಪಸಂಖ್ಯಾತರಿಗೆ ಮೂರು ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿ: ಡಾ.ಸೈಯದ್ ನಾಸಿರ್ ಹುಸೇನ್

Update: 2019-03-20 14:12 GMT

ಬೆಂಗಳೂರು, ಮಾ.20: ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡುವುದಲ್ಲದೇ, ಪ್ರಭಾವಿ ಮುಖಂಡರನ್ನು ಆಯಾ ಕ್ಷೇತ್ರಗಳ ಉಸ್ತುವಾರಿಗಳನ್ನಾಗಿ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ವಹಿಸಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಒತ್ತಾಯಿಸಿದರು.

ಬುಧವಾರ ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ಅದರಲ್ಲಿ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆ ಅಗತ್ಯ. ಆದರೆ, ಪಂಚಾಯತ್ ನಿಂದ ಸಂಸತ್ತಿನವರೆಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಕುಸಿಯುತ್ತಿರುವುದು ಆತಂಕಕಾರಿ ಎಂದರು.

ಈ ಹಿಂದೆ ಗುಲ್ಬರ್ಗ, ಹಾವೇರಿ ಹಾಗೂ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ, ಕಳೆದ 15 ವರ್ಷಗಳಿಂದ ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯೂ ನಮ್ಮ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿ ಹೋಗಿಲ್ಲ. ಆದುದರಿಂದ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯದಲ್ಲಿ ಭರವಸೆಯನ್ನು ಮೂಡಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ಪಕ್ಷದ ಟಿಕೆಟ್‌ಗಾಗಿ ಈಗಾಗಲೇ ಅಲ್ಪಸಂಖ್ಯಾತರು ಸಂಬಂಧಪಟ್ಟ ಕ್ಷೇತ್ರಗಳಿಂದ ಅರ್ಜಿ ಸಲ್ಲಿಸಿದ್ದಾರೆ. ಹತ್ತಾರು ವರ್ಷಗಳಿಂದ ಪಕ್ಷದಲ್ಲಿ ಯಾವುದೇ ಪ್ರತಿಫಲ ನಿರೀಕ್ಷಿಸದೆ ಕೆಲಸ ಮಾಡುತ್ತಿರುವ ಹಲವಾರು ಹಿರಿಯ ಮುಖಂಡರು, ಕಾರ್ಯಕರ್ತರು ನಮ್ಮಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಪಕ್ಷ ಅವಕಾಶ ಕಲ್ಪಿಸಬೇಕು ಎಂದು ನಾಸಿರ್ ಹುಸೇನ್ ಒತ್ತಾಯಿಸಿದರು.

ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರೆ ಅವರು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಟಿಕೆಟ್‌ಗಳನ್ನೇ ನೀಡದೆ, ಅವರನ್ನು ಚುನಾವಣಾ ಪ್ರಕ್ರಿಯೆಯಿಂದ ದೂರವಿಡುವ ವಾತಾವರಣ ನಿರ್ಮಾಣವಾದರೆ, ಅಲ್ಪಸಂಖ್ಯಾತರಲ್ಲಿ ಚುನಾವಣಾ ವ್ಯವಸ್ಥೆಯ ಕುರಿತು ನಿರಾಸಕ್ತಿ ಮೂಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಮ್ಮ ರಾಜ್ಯದ 13 ಜಿಲ್ಲಾ ಪಂಚಾಯತ್ ಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬ ಚುನಾಯಿತ ಪ್ರತಿನಿಧಿಯೂ ಇಲ್ಲ. ಗ್ರಾಮ ಪಂಚಾಯತ್ ನಿಂದ ಸಂಸತ್ತಿನವರೆಗೆ ಅಲ್ಪಸಂಖ್ಯಾತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಗಬೇಕು. ಅಲ್ಲದೇ, ನಿಗಮ, ಮಂಡಳಿಗಳ ನೇಮಕಾತಿಗಳಲ್ಲೂ ಅವಕಾಶಗಳು ಸಿಗಬೇಕು ಎಂದು ಅವರು ಹೇಳಿದರು.

ಹಿಂದಿನ ಸರಕಾರದಲ್ಲಿ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿ ಶಿಫಾರಸ್ಸಿನಂತೆ ಪಂಚಾಯತ್‌ ರಾಜ್ ಕಾಯ್ದೆಗೆ ತಿದ್ದುಪಡಿ ತಂದು, ಜಿಲ್ಲಾ ಪಂಚಾಯತ್ ಗಳಿಗೆ ಅಲ್ಪಸಂಖ್ಯಾತರನ್ನು ನಾಮನಿರ್ದೇಶನ ಮಾಡುವ ನಿಟ್ಟಿನಲ್ಲಿ ಸರಕಾರ ಪ್ರಯತ್ನಿಸಬೇಕು ಎಂದು ನಾಸಿರ್ ಹುಸೇನ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News