4 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ಆಸ್ತಿ ಪತ್ತೆ

Update: 2019-03-20 14:48 GMT

ಬೆಂಗಳೂರು, ಮಾ.20: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ, ರಾಜ್ಯದ 4 ಸರಕಾರಿ ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ಹತ್ತು ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಿದ್ದ ಪ್ರಕರಣ ಸಂಬಂಧ ಆರೋಪಿಗಳ ಆಸ್ತಿ ಪತ್ತೆಯಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಲಾಕರ್‌ಗಳು ಹಾಗೂ ಜಮೀನು ಪತ್ತೆಯಾಗಿದೆ.

ಸಹಕಾರ ಸಂಘಗಳ ಅಪರ ನಿಬಂಧಕ ಬಿ.ಸಿ.ಸತೀಶ್ ಅವರ ಬೆಂಗಳೂರಿನಲ್ಲಿರುವ ಕಚೇರಿ, ಮನೆ ಮೇಲೆ ದಾಳಿ ಸಂಬಂಧ, ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 1 ಮನೆ, 2 ನಿವೇಶನ, 1 ಕೆಜಿ ಚಿನ್ನ, 20.9 ಕೆಜಿ ಬೆಳ್ಳಿ, 1 ಕಾರು, ಬೈಕ್, ಬ್ಯಾಂಕ್ ನಲ್ಲಿ 3.84 ಲಕ್ಷ ರೂ.ಠೇವಣಿ, 34.16 ಲಕ್ಷ ಗೃಹೋಪಯೋಗಿ ವಸ್ತುಗಳ ಜೊತೆಗೆ ಒಂದು ಲಾಕರ್ ಪತ್ತೆಯಾಗಿದೆ.

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮ ಉಪ ನಿರ್ದೇಶಕ ಶರದ್ ಗಂಗಪ್ಪ ಇಜ್ರಿ ಅವರ ಬಳಿ 2 ಮನೆ, 1 ಫ್ಲಾಟ್, ವಿವಿಧ ಸರ್ವೆ ನಂಬರ್‌ಗಳಲ್ಲಿ 32 ಎಕರೆ 24 ಗುಂಟೆ ಕೃಷಿ ಭೂಮಿ, 675 ಗ್ರಾಂ ಚಿನ್ನ, 12.5 ಕೆಜಿ ಬೆಳ್ಳಿ, 3 ಕಾರು, 3 ಬೈಕ್, 42.66 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 3.97 ಲಕ್ಷ ಠೇವಣಿ, 10 ಲಕ್ಷ ಮೊತ್ತದ ವಿಮೆ ಪಾಲಿಸಿ ಹಾಗೂ 1 ಲಾಕರ್ ಬೆಳಕಿಗೆ ಬಂದಿದೆ.

ಗದಗ ಜಿಲ್ಲೆಯ ಮಂಡರಗಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ್ ಗೌಡ ಕುದರಿಮೊಟಿ, ಅವರ ಹೆಸರಿನಲ್ಲಿ ಮುಂಡರಗಿಯಲ್ಲಿ 2 ಮನೆ, 3 ನಿವೇಶನ, ಕುಕನೂರಿನಲ್ಲಿ 5 ಎಕರೆ ಮತ್ತು ಹರಲಾಪುರದಲ್ಲಿ 4.29 ಎಕರೆ ಮತ್ತು ಹಳ್ಳಿಗುಡ್ಡಿ ಗ್ರಾಮದಲ್ಲಿ 7.31 ಕೃಷಿ ಭೂಮಿ, 570 ಗ್ರಾಂ ಚಿನ್ನ, 2.29 ಕೆಜಿ ಬೆಳ್ಳಿ, ಒಂದು ಕಾರು, ಎರಡು ಬೈಕ್ ಪತ್ತೆಯಾಗಿವೆ.

ಬಿಬಿಎಂಪಿ ವ್ಯಾಪ್ತಿಯ ಜೆಬಿ ನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಎಸ್.ಬಿ.ಮಂಜುನಾಥ್ ಅವರ ಹೆಸರಿನಲ್ಲಿ 2 ಮನೆ, 4 ನಿವೇಶನ, ಚನ್ನರಾಯಪಟ್ಟಣದ ಬಿ.ಎಂ ರಸ್ತೆಯಲ್ಲಿ ಒಂದು ಮನೆಯ ಜೊತೆಗೆ ವಾಣಿಜ್ಯ ಸಂಕೀರ್ಣ, ಹಾಸನದಲ್ಲಿ 13 ಗುಂಟೆ ಜಮೀನು, 453 ಗ್ರಾಂ ಚಿನ್ನ, 1.23 ಕೆಜಿ ಬೆಳ್ಳಿ ಒಂದು ಕಾರು, ಬೈಕ್, 4.26 ಲಕ್ಷ ನಗದು, 19 ಲಕ್ಷ ಗೃಹೋಪಯೋಗಿ ವಸ್ತುಗಳು ಹಾಗೂ 2 ಲಾಕರ್‌ಗಳು ಪತ್ತೆಯಾಗಿವೆ ಎಂದು ಎಸಿಬಿ ತಿಳಿಸಿದೆ.

ಸರಕಾರಿ ಅಧಿಕಾರಿಗಳು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ಈಗಾಗಲೇ ದೊರೆತಿರುವ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ ಎಂದು ಎಸಿಬಿ ತನಿಖಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News