ರಾಜ್ಯ ಚುನಾವಣಾ ರಾಯಭಾರಿಯಾಗಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಗೌಡ ಆಯ್ಕೆ

Update: 2019-03-20 15:57 GMT

ಬೆಂಗಳೂರು, ಮಾ.20: ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ-2019 ರ ರಾಯಭಾರಿಯಾಗಿ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿರುವ ಹಾಗೂ ಪದ್ಮಶ್ರೀ ಪುರಸ್ಕೃತ ಗಿರೀಶ್ ಎನ್.ಗೌಡರನ್ನು ಆಯ್ಕೆ ಮಾಡಲಾಗಿದೆ.

ನಗರದ ವಾರ್ತಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಗಿರೀಶ್ ಗೌಡರನ್ನು ಸನ್ಮಾನಿಸುವ ಮೂಲಕ ರಾಯಭಾರಿಯನ್ನಾಗಿ ಘೋಷಿಸಿದರು.

ಬಳಿಕ ಮಾತನಾಡಿದ ಗಿರೀಶ್ ಗೌಡ, ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಗೆಲ್ಲಿಸಬೇಕಾದ ಕರ್ತವ್ಯ ಎಲ್ಲರದ್ದಾಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ವ್ಯವಸ್ಥೆಯನ್ನು ಬಲಪಡಿಸಲು ಕೈ ಜೋಡಿಸಬೇಕು. ದೇಶದ ಪ್ರಜ್ಞಾವಂತ ಮತದಾರರು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ವಿಶೇಷಚೇತನರು ಮತದಾನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಚುನಾವಣಾ ಆಯೋಗವು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಮತದಾನ ಮಾಡಲು ಅವಕಾಶವಾಗುವಂತೆ ಸಾರಿಗೆ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 4.03 ಲಕ್ಷ ದಿವ್ಯಾಂಗ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 35,739 ಮತಗಟ್ಟೆಗಳಲ್ಲಿ ಮತದಾರರಿದ್ದು, ಎಲ್ಲರಿಗೂ ಅನುಕೂಲವಾಗುವಂತೆ 35,739 ಗಾಲಿ ಕುರ್ಚಿಗಳು, 41,669 ಭೂತಗನ್ನಡಿಗಳು, 2,213 ಸಂಜ್ಞಾ ಭಾಷೆ ವಿವರಣೆಗಾರರು, 31,515 ಸಹಾಯಕರನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಎಲ್ಲ ಮತಗಟ್ಟೆಗಳನ್ನು ನೆಲಮಹಡಿಯಲ್ಲಿಯೇ ಸ್ಥಾಪಿಸಿದ್ದು, ದಿವ್ಯಾಂಗ ಮತದಾರರಿಗೆ ಅಡೆತಡೆಯಿಲ್ಲದೆ ಮತ ಚಲಾಯಿಸಲು ರ್ಯಾಂಪ್‌ಗಳನ್ನು ಅಳವಡಿಸಲಾಗುವುದು. ಅಲ್ಲದೆ, ಸಾಲಿನಲ್ಲಿ ನಿಲ್ಲದೇ ನೇರವಾಗಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತಗಟ್ಟೆಗಳ ಸಮೀಪದಲ್ಲಿ ದಿವ್ಯಾಂಗರಿಗೆ ನೆರಳು ಒದಗಿಸಲು ತಾತ್ಕಾಲಿಕ ಪೆಂಡಾಲ್ ಹಾಕಲಾಗುವುದು ಎಂದು ಅವರು ವಿವರಿಸಿದರು.

ಬ್ರೈಲ್ ಲಿಪಿ ಪೋಸ್ಟರ್: ದಿವ್ಯಾಂಗರಿಗೆ ಅನುಕೂಲವಾಗುವಂತೆ ಮತದಾನದ ಕೇಂದ್ರದ ಬಳಿ ಬ್ರೈಲ್ ಲಿಪಿಯಲ್ಲಿನ ಪೋಸ್ಟರ್‌ಅನ್ನು ಅಳವಡಿಸಲಾಗುವುದು. ಅದರ ಜತೆಗೆ ಮತದಾರರಿಗೆ ಸಂದೇಶದ ಜತೆಗೆ ಮತದಾನದ ದಿನಾಂಕ ಹಾಗೂ ಮತದಾನ ಸಮಯವನ್ನು ಒಳಗೊಂಡ ವಿವರಗಳಿರುವ ಬ್ರೈಲ್ ಪೋಸ್ಟರ್ ಕಾರ್ಡ್ ನೀಡಲಾಗುತ್ತದೆ. ಜತೆಗೆ ಸಂಜ್ಞಾ ಭಾಷಾ ತಜ್ಞರ ಸೇವೆಯನ್ನು ಮತದಾನದ ಸಂದೇಶ ನೀಡಲು ಬಳಸಲಾಗುವುದು ಎಂದು ಮಾಹಿತಿ ನೀಡಿದರು.

ದಿವ್ಯಾಂಗರ ಬೂತ್‌ಗಳು: ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಾಗೂ ಉಪ ಚುನಾವಣೆಯಲ್ಲಿ ದಿವ್ಯಾಂಗರಲ್ಲಿ ಆತ್ಮವಿಶ್ವಾಸ ಹೊಂದಿದ ಹಾಗೂ ವಿಶೇಷವಾಗಿ ಉತ್ತೇಜಿಸಲ್ಪಟ್ಟ ಅಧಿಕಾರಿಗಳಿಂದ ರಾಜ್ಯದ ವಿವಿಧ ಮತಗಟ್ಟೆಗಳಲ್ಲಿ ಎಲ್ಲರೂ ದಿವ್ಯಾಂಗರು ಕೆಲಸ ನಿರ್ವಹಿಸಿದ್ದರು. ಈ ಬಾರಿಯೂ 33 ಚುನಾವಣಾ ಜಿಲ್ಲೆಗಳ ವ್ಯಾಪ್ತಿಯಲ್ಲಿಯೂ ದಿವ್ಯಾಂಗರೇ ನಿರ್ವಹಿಸುವ ಬೂತ್‌ಗಳನ್ನು ಸ್ಥಾಪಿಸಲಾಗುವುದು ಎಂದು ನುಡಿದರು.

ರಾಜ್ಯದಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು 1.56 ಕೋಟಿ ನಗದು, 21.50 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. 812 ಎನ್‌ಡಿಪಿಎಸ್ ಹಾಗೂ 725 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣಗಳು, ಅಬಕಾರಿ ಕಾಯ್ದೆ ಅಡಿಯಲ್ಲಿ 2361 ಪ್ರಕರಣಗಳನ್ನು ದಾಖಲಿಸಲಾಗಿದೆ. 390 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಯಶ್-ದರ್ಶನ್-ಅಂಬಿ ಚಿತ್ರಗಳು ನೀತಿಸಂಹಿತೆ ಅಡಿಯಲ್ಲಿ ಬರುವುದಿಲ್ಲ

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಟಿಸಿರುವ ಚಲನಚಿತ್ರಗಳನ್ನು ಸಾರ್ವಜನಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ, ಅಂಬರೀಶ್, ಯಶ್ ಹಾಗೂ ದರ್ಶನ್ ಅವರುಗಳ ಚಿತ್ರಗಳು ಖಾಸಗಿ ವಾಹಿನಿಗಳಲ್ಲಿ ಹಾಗೂ ಚಲನಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ನೀತಿ ಸಂಹಿತೆ ಅಡಿಯಲ್ಲಿ ಬರುವುದಿಲ್ಲ. ಈ ಸಂಬಂಧ ದೂರುಗಳು ಬರುತ್ತಿದ್ದು, ಅದು ಸರಿಯಲ್ಲ.

-ಸಂಜೀವ್ ಕುಮಾರ್, ರಾಜ್ಯ ಮುಖ್ಯಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News