ಮೋದಿ ಆಡಳಿತದಲ್ಲಿ ಬೆಳವಣಿಗೆ ಕಂಡಿದ್ದು ಆರೆಸ್ಸೆಸ್ ಚಡ್ಡಿ ಮಾತ್ರ: ರಾಮಲಿಂಗಾ ರೆಡ್ಡಿ

Update: 2019-03-20 16:29 GMT

ಬೆಂಗಳೂರು, ಮಾ.20: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶದಲ್ಲಿ ಬೆಳವಣಿಗೆ ಕಂಡಿದ್ದು ಆರೆಸ್ಸೆಸ್ ಚಡ್ಡಿ ಮಾತ್ರ. ಆರೆಸ್ಸೆಸ್ ಚಡ್ಡಿ ಹೋಗಿ ಪ್ಯಾಂಟ್ ಬಂದಿದ್ದೇ ಬಿಜೆಪಿಯ ದೊಡ್ಡ ಸಾಧನೆ ಎಂದು ಮಾಜಿ ಸಚಿವ, ಕೆಪಿಸಿಸಿ ಸಮನ್ವಯ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ದೊಡ್ಡ ಸಾಧನೆ ಆರೆಸ್ಸೆಸ್ ಚಡ್ಡಿ ಹೋಗಿ ಪ್ಯಾಂಟ್ ಬಂದದ್ದು ಮಾತ್ರ. ಪ್ರಧಾನಿ ಮೋದಿ ಆರೆಸ್ಸೆಸ್ ಹೆಸರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ರಿಲಯನ್ಸ್ ಸೇವಾ ಸಂಘವಾಗಿ ಪರಿವರ್ತಿಸಿ, ದೇಶದ ಸಂಪತ್ತನ್ನು ಧಾರೆ ಎರೆದಿದ್ದಾರೆ ಎಂದು ಆರೋಪಿಸಿದರು. 

ಹಿಂದುತ್ವದ ಪರವಾಗಿ ನಕಲಿ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ದೇಶದಲ್ಲಿ ಗೋ ಮಾಂಸ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಮೋದಿ ಆಡಳಿತದಲ್ಲಿ ಭಾರತವು ಗೋಮಾಂಸ ರಫ್ತು ಮಾಡುವಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಗೋಮಾಂಸ ರಫ್ತು ಮಾಡುತ್ತಿರುವ ಕಂಪೆನಿಗಳ ಮಾಲಕರಲ್ಲಿ ಬಿಜೆಪಿಯವರೇ ಹೆಚ್ಚಾಗಿದ್ದಾರೆ. ಈ ಬಗ್ಗೆ ದ್ವಾರಕಾ ಪೀಠದ ಶಂಕರಾಚಾರ್ಯ ಶ್ರೀ ಸ್ವರೂಪಾನಂದ ಸರಸ್ವತಿಯವರೇ ಬಹಿರಂಗ ಹೇಳಿಕೆ ನೀಡಿ, ಬಿಜೆಪಿಯ ನಕಲಿ ಗೋಪ್ರೀತಿಯನ್ನು ಖಂಡಿಸಿದ್ದಾರೆ ಎಂದು ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ಹಿಟ್ಲರ್ ಆಡಳಿತದಲ್ಲಿದ್ದ ಗೊಬೆಲ್ಸ್‌ ಅನ್ನು ಮಣಿಸಿದ್ದಾರೆ. ಪ್ರತಿಯೊಬ್ಬರ ಬ್ಯಾಂಕ್ ಅಕೌಂಟ್‌ಗೆ 15 ಲಕ್ಷ ರೂ. ಹಾಕುತ್ತೇನೆಂದರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದರು. ಯಾವುದೂ ಮಾಡಿಲ್ಲ. ಈ ಬಗ್ಗೆ ಪ್ರಶ್ನೆ ಕೇಳುವವರಿಗೆ ದೇಶದ್ರೋಹಿ ಪಟ್ಟ ಕಟ್ಟುವಂತಹ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದಿನ ಯಾವ ಸರಕಾರದ ಅವಧಿಯಲ್ಲೂ ಇಷ್ಟೊಂದು ಪ್ರಮಾಣದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದರಲ್ಲಿ ಹೆಚ್ಚಿನವು ಬಿಜೆಪಿ ಆಡಳಿತವಿರುವ ರಾಜ್ಯಗಳೇ ಆಗಿವೆ. 3ಲಕ್ಷ ಕೋಟಿ ರೂ.ಗೂ ಹೆಚ್ಚು ಕಾರ್ಪೊರೇಟ್ ಕಂಪೆನಿಗಳ ಸಾಲ ಮನ್ನಾ ಮಾಡುತ್ತಾರೆ. ಆದರೆ, ರೈತರ ಸಾಲ ಮಾನ್ನಾ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News