ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಖಾಸಗಿ ದೂರು ದಾಖಲಿಸದ ಇನ್‌ಸ್ಪೆಕ್ಟರ್ ವಿರುದ್ಧ ಹೈಕೋರ್ಟ್ ಕಿಡಿ

Update: 2019-03-20 16:53 GMT

ಬೆಂಗಳೂರು, ಮಾ.20: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಕಾನೂನು ಲೋಪ ಎಸಗಿದ ಚಿತ್ರದುರ್ಗ ಟೌನ್ ಇನ್‌ಸ್ಪೆಕ್ಟರ್‌ಗೆ ಹೈಕೋರ್ಟ್ ತಪರಾಕಿ ನೀಡಿದೆ.

ಮೋದಿ ಅವರನ್ನು ಗುಂಡು ಹಾರಿಸಿ ಅಥವಾ ಬಾಂಬ್ ಸ್ಫೋಟಿಸಿ ಕೊಲೆ ಮಾಡಿದರೆ ಸ್ಮಾರಕ ನಿರ್ಮಿಸಬಹುದು. ಅದಕ್ಕೆ ಅವಸರ ಏನಿಲ್ಲ ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದ. ಆತನ ವಿರುದ್ಧ 2019ರ ಫೆ.27ರಂದು ಚಿತ್ರದುರ್ಗ ಟೌನ್‌ ಇನ್‌ಸ್ಪೆಕ್ಟರ್ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿ ರತೀಶ್ ಜಾನ್ಸನ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ವಿಚಾರಣೆ ನಡೆಯಿತು.

ಅರ್ಜಿದಾರನ ಪರ ವಕೀಲರು ವಾದ ಮಂಡಿಸಿ, ಜಾನ್ಸನ್ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 501(1)(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅದು ಸಂಜ್ಞೆಯ ಅಪರಾಧ ಕೃತ್ಯವಾಗಿದೆ(ನಾನ್ ಕಾಗ್ನಿಜಬಲ್ ಅಫೆನ್ಸ್). ಇಂಥ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಬೇಕು. ಆದರೆ, ಈ ಪ್ರಕರಣದಲ್ಲಿ ನೇರವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಆ ಮೂಲಕ, ಇನ್‌ಸ್ಪೆಕ್ಟರ್ ಲೋಪ ಎಸಗಿದ್ದು, ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕೆಂದು ಕೋರಿದರು.

ಇನ್ಸ್‌ಪೆಕ್ಟರ್ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಅಗತ್ಯ ಕ್ರಮ ಜರುಗಿಸಲಿದೆ ಎಂದು ನ್ಯಾಯಮೂರ್ತಿಗಳು ಕಟು ಎಚ್ಚರಿಕೆ ನೀಡಿದರು. ಈ ಮಧ್ಯೆ, ಸರಕಾರಿ ವಕೀಲ ರಾಚಯ್ಯ ಅವರು, ನ್ಯಾಯಾಲಯ ಅನುಮತಿ ನೀಡಿದರೆ ಕಾನೂನು ಪ್ರಕಾರ ಖಾಸಗಿ ದೂರು ದಾಖಲಿಸಲಾಗುವುದು ಎಂದರು. ನಂತರ ಅರ್ಜಿ ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿದ ನ್ಯಾಯಪೀಠ, ಅಲ್ಲಿಯವರೆಗೆ ಪ್ರಕರಣದಲ್ಲಿ ಮುಂದಿನ ಕ್ರಮ ಜರುಗಿಸಬಾರದು ಎಂದು ಸೂಚಿಸಿ ಮಧ್ಯಂತರ ಆದೇಶ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News