ಸಿಆರ್‌ಪಿಎಫ್ ಯೋಧನಿಂದ ಮೂವರು ಸಹೋದ್ಯೋಗಿಗಳ ಹತ್ಯೆ

Update: 2019-03-21 03:21 GMT

ಶ್ರೀನಗರ, ಮಾ.21: ವಾಗ್ವಾದದಲ್ಲಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಸಿಆರ್‌ಪಿಎಫ್ ಯೋಧನೊಬ್ಬ ಮೂವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಜಮ್ಮು ಕಾಶ್ಮೀರದ ಸಿಆರ್‌ಪಿಎಫ್ ಶಿಬಿರದಲ್ಲಿ ನಡೆದಿದೆ.

ಬುಧವಾರ ರಾತ್ರಿ 10 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಕಾನ್‌ಸ್ಟೇಬಲ್ ಅಜಿತ್ ಕುಮಾರ್ ಎಂಬಾತ ಸರ್ವೀಸ್ ರೈಫಲ್‌ನಿಂದ ಗುಂಡು ಹಾರಿಸಿ ಮೂವರು ಸಹೋದ್ಯೋಗಿಗಳನ್ನು ಹತ್ಯೆ ಮಾಡಿದ್ದಾನೆ ಎಂದು ಆಪಾದಿಸಲಾಗಿದೆ. ಉಧಾಂಪುರದಲ್ಲಿರುವ ಸಿಆರ್‌ಪಿಎಫ್ 187ನೇ ಬೆಟಾಲಿಯನ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮೂವರನ್ನು ಹತ್ಯೆ ಮಾಡಿದ ಕುಮಾರ್ ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಿಆರ್‌ಪಿಎಫ್ ಮೂಲಗಳು ಹೇಳಿವೆ.

ಉತ್ತರ ಪ್ರದೇಶದ ಕಾನ್ಪುರ ಮೂಲದ ಕುಮಾರ್‌ಗೆ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯೋಧರನ್ನು ರಾಜಸ್ಥಾನದ ಜುಂಝುನು ಎಂಬಲ್ಲಿನ ಪೊಕಾರ್‌ಮಲ್ ಆರ್., ದಿಲ್ಲಿಯ ಯೋಗೇಂದ್ರ ಶರ್ಮಾ ಮತ್ತು ಹರ್ಯಾಣದ ರೇವಾರಿಯ ಉಮೇದ್ ಸಿಂಗ್ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News