ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ಮಾ.22 ರಂದು ಬಿಜೆಪಿ ಸೇರ್ಪಡೆ

Update: 2019-03-21 17:34 GMT

ಬೆಂಗಳೂರು, ಮಾ. 21: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ಪಕ್ಷ ತೊರೆದು ನಾಳೆ(ಮಾ.22) ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಗುರುವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ ಮಾಲಕರೆಡ್ಡಿ, ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಕಡೆಗಣನೆ ಹಾಗೂ ಮೈತ್ರಿ ಸರಕಾರದ ಬಗೆಗಿನ ತನ್ನ ಅಸಮಾಧಾನದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಯಡಿಯೂರಪ್ಪರ ಜೊತೆ ಸುಮಾರು 15 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಮಾಲಕರೆಡ್ಡಿ, ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಏಕೈಕ ಉದ್ದೇಶದಿಂದ ತಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆಂದು ಮಾಲಕರೆಡ್ಡಿ ತಿಳಿಸಿದ್ದಾರೆಂದು ಹೇಳಲಾಗಿದೆ.

ನಮ್ಮದೇನು ನಡೆಯದು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದರೂ, ನಮ್ಮದೇನು ನಡೆಯುವುದಿಲ್ಲ. ಜಿಲ್ಲೆ ಮತ್ತು ರಾಜ್ಯದಲ್ಲಿ ಜೆಡಿಎಸ್‌ನವರದ್ದೇ ನಡೆಯುವುದು. ನಾನು ಹಿರಿಯನಾದರೂ ಪಕ್ಷದಲ್ಲಿ ಗೌರವವಿಲ್ಲ. ಜಿಲ್ಲೆಯಲ್ಲಿ ನಮ್ಮ ಮಾತಿಗೆ ಬೆಲೆಯಿಲ್ಲ ಎಂದು ಮಾಲಕರೆಡ್ಡಿ ತಿಳಿಸಿದರು.

ಜಿಲ್ಲೆ ಮತ್ತು ರಾಜ್ಯ ರಾಜಕೀಯದಲ್ಲಿ ನಾವು ಹಿರಿಯರು. ಆದರೆ, ರಾಜಕೀಯದಲ್ಲಿ ಚಿಕ್ಕವರಿರುವ ಜೆಡಿಎಸ್ ನಾಯಕರ ಮುಂದೆ ನಾವು ನಿಲ್ಲಬೇಕಾಗಿದೆ. ಪಕ್ಷದ ರಾಜ್ಯ ನಾಯಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಮಗೆ ಬೇಸರವಾಗಿದೆ ಎಂದು ಮಾಲಕರೆಡ್ಡಿ ತನ್ನ ಅಳಲು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News