ಪ್ರಧಾನ ಸುತ್ತಿಗೆ ಪ್ರಜ್ಞೇಶ್ ಗುಣೇಶ್ವರನ್

Update: 2019-03-21 18:59 GMT

ಮಿಯಾಮಿ, ಮಾ.21: ಭಾರತದ ನಂ.1 ಸಿಂಗಲ್ಸ್ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಜಾಯ್ ಕ್ಲರ್ಕ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಮಿಯಾಮಿ ಓಪನ್ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ. ಸತತ ಎರಡನೇ ಬಾರಿ ಅವರು ಮಾಸ್ಟರ್ಸ್ ಟೂರ್ನಿಯ ಮುಖ್ಯ ಡ್ರಾಗೆ ಪ್ರವೇಶ ಪಡೆದ ಸಾಧನೆಗೈದಿದ್ದಾರೆ.

  ಇಲ್ಲಿ ಗುರುವಾರ ನಡೆದ ಎರಡನೇ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಕ್ಲಾರ್ಕ್‌ರನ್ನು 6-4, 6-4 ಸೆಟ್‌ಗಳಿಂದ ಮಣಿಸಿ ಎಟಿಪಿ 100 ಟೆನಿಸ್ ಟೂರ್ನಿಯ ಅಂತಿಮ ಡ್ರಾಗೆ ಮುನ್ನಡೆದರು. ಈ ವಾರದ ಆರಂಭದಲ್ಲಿ ಜೀವನಶ್ರೇಷ್ಠ 84ನೇ ಎಟಿಪಿ ರ್ಯಾಂಕಿಂಗ್‌ಗೆ ತಲುಪಿದ್ದ ಭಾರತದ ನಂ.1 ಆಟಗಾರ ಪ್ರಜ್ಞೇಶ್ ಈ ಪಂದ್ಯದ ಪ್ರಥಮ ಗೇಮ್‌ನಲ್ಲಿ ಕ್ಲಾರ್ಕ್ ರ ಸರ್ವ್ ಮುರಿದು ಆಕ್ರಮಣಕಾರಿ ಆರಂಭ ಪಡೆದರು. ಪ್ರಥಮ ಸೆಟ್‌ನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿ ಅವರು ಎರಡು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು. 29 ವರ್ಷದ ಪ್ರಜ್ಞೇಶ್‌ಗೆ ಎರಡನೇ ಸೆಟ್ ಕೂಡ ಯಾವುದೇ ರೀತಿಯಲ್ಲಿ ಭಿನ್ನವಾಗಿ ಕಾಣಲಿಲ್ಲ. ಈ ಸೆಟ್‌ನ ಪ್ರಥಮ ಗೇಮ್‌ನಲ್ಲಿ 20 ವರ್ಷದ ಎದುರಾಳಿಯ ಸರ್ವ್ ಮುರಿದರು. ಆ ಬಳಿಕ ಕ್ಲರ್ಕ್ ಎರಡು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ಸೆಟ್ ಹಾಗೂ ಪಂದ್ಯ ಪ್ರಜ್ಞೇಶ್ ಪಾಲಾಗುವುದನ್ನು ತಪ್ಪಿಸಲಾಗಲಿಲ್ಲ.

ಪ್ರಜ್ಞೇಶ್ ಇಂಡಿಯನ್ ವೆಲ್ಸ್ ಬಳಿಕ ಎರಡನೇ ಬಾರಿ ಮಾಸ್ಟರ್ಸ್ ಟೂರ್ನಿಯ ಮುಖ್ಯ ಡ್ರಾಗೆ ಪ್ರವೇಶ ಪಡೆದರು. ಮುಖ್ಯ ಡ್ರಾನ ಮೊದಲ ಸುತ್ತಿನಲ್ಲಿ ಅವರು ಸ್ಪೇನ್‌ನ ಜಾವುಮೆ ಮ್ಯುನಾರ್ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News