ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರೈ ನಾಮಪತ್ರ ಸಲ್ಲಿಕೆ

Update: 2019-03-22 13:27 GMT

ಬೆಂಗಳೂರು, ಮಾ.22: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಬಹುಭಾಷಾ ನಟ ಪ್ರಕಾಶ್‌ರೈ ಸ್ವತಂತ್ರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕಾರಣಿಗಳು ರಾಜಕೀಯಕ್ಕೆ ಬಂದು ಏನಾದರೂ ಬದಲಾವಣೆ ಮಾಡಬೇಕು. ಆದರೆ, ಇಂದಿನ ರಾಜಕಾರಣಿಗಳು ನಮ್ಮ ಹಣದಿಂದ ಆಡಳಿತ ನಡೆಸುತ್ತಾ, ಅದನ್ನು ಲಪಟಾಯಿಸಲು ಮುಂದಾಗಿದ್ದಾರೆ ಎಂದು ಆಪಾದಿಸಿದರು.

ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳಂತೆ ಜನರನ್ನು ತೋರಿಸುವ ಸಲುವಾಗಿ ಹಣ ಕೊಟ್ಟು ಕರೆಸುವ ಹಲವು ಉದಾಹರಣೆಗಳಿವೆ. ಆದರೆ, ಬೇರೆಯವರ ಥರ ಒಬ್ಬರಿಗೆ 300 ರೂಪಾಯಿ ಕೊಟ್ಟು ಜನರನ್ನು ಕರೆಸುವ ಅವಶ್ಯಕತೆ ನನಗಿಲ್ಲ. ತಾವಾಗೇ ಬಂದಿರುವ ಜನ ಇವರು. ನಾನು ಮಾಡಿರುವ ಸಮಾಜಮುಖಿ ಕೆಲಸ ಜನರಿಗೆ ಗೊತ್ತಿದೆ. ಹಾಗಾಗಿ ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದರು.

ರಾಜಕೀಯಕ್ಕೆ ಇಳಿಯುವುದು ಅಲ್ಲ, ರಾಜಕೀಯಕ್ಕೆ ಪ್ರವೇಶ ಮಾಡುವುದು. ಇದು ಜೀವನದ ಇನ್ನೊಂದು ಮೆಟ್ಟಿಲು. ಇದು ನೈಸರ್ಗಿಕವಾಗಿ ನಡೆಯುತ್ತೆ. ಇನ್ನು ಮುಂದೆ ಇದು ಜೀವನದ ವಿಧಾನ. ಅದು ಸೋಲು-ಗೆಲುವಿನ ಪ್ರಶ್ನೆ ಅಲ್ಲ. ನಮ್ಮನ್ನು ಮತಹಾಕಿ ಗೆಲ್ಲಿಸಿದ ಜನರ ಪರ ಕೆಲಸ ಮಾಡಬೇಕು. ಅವರ ಧ್ವನಿ ಹಾಗೂ ಪ್ರತಿನಿಧಿ ಆಗಬೇಕು. ನಾನು ಕೇವಲ ನಟ ಅಲ್ಲ. ಜನರು ನನ್ನನ್ನು ಕೇವಲ ನಟನಾಗಿ ನೋಡುತ್ತಿಲ್ಲ. ನಾನು ಜನರ ಸಮಸ್ಯೆ ತಿಳಿದುಕೊಂಡಿರುವವನು. ಯಾರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿಲ್ಲ. ಜನರ ಪರವಾಗಿ ಮಾತನಾಡುತ್ತಿದ್ದೇನೆ ಹಾಗೂ ಮುಂದೆಯೂ ಮಾತನಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ರಾಜಕೀಯದಲ್ಲಿ ಸಿನಿಮಾದವರು ಮಾತ್ರವಲ್ಲದೇ ಉದ್ಯಮಿಗಳು, ಲಾಯರ್‌ಗಳು ಸ್ಪರ್ಧಿಸಿದ್ದು, ಕೆಲವರು ಗೆದ್ದರೆ, ಕೆಲವರು ಸೋತಿದ್ದಾರೆ. ಇದನ್ನು ಸಿನಿಮಾ ಎಂದು ನೋಡಬೇಡಿ. ಒಂದು ಪ್ರಜೆಯಾಗಿ ನೋಡಿ. ಒಬ್ಬ ವ್ಯಕ್ತಿ ಮಾಡಿದ ಸಾಧನೆ ಹಾಗೂ ವ್ಯಕ್ತಿತ್ವವನು ನೋಡಿ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲ ಬೇಕಾಗಿಲ್ಲ. ನಾನು ಹುಟ್ಟಿದ್ದು, ಬಾಲ್ಯ ಕಳೆದದ್ದು, ಶಿಕ್ಷಣ, ರಂಗಭೂಮಿ ಎಲ್ಲವೂ ಇಲ್ಲಿಯೇ ನಡೆದಿದೆ. ಹೀಗಾಗಿ, ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.

ಪ್ರಕಾಶ್ ರಾಜ್ ಹೆಂಡತಿ ಪೋನಿ ವರ್ಮಾ ಮಾತನಾಡಿ, ಪ್ರಕಾಶ್ ಯಾವಾಗಲೂ ತಾನು ಹುಟ್ಟಿದ ಊರಿನ ಅಭಿವೃದ್ಧಿ ಬಗ್ಗೆ ಆಲೋಚಿಸುತ್ತಿದ್ದರು. ಕಳೆದ ಆರೇಳು ತಿಂಗಳಿಂದ ಈ ಬಗ್ಗೆ ಆಲೋಚಿಸಿ ತೆಗೆದುಕೊಂಡ ನಿರ್ಧಾರ ಇದು. ಜನರ ಬೆಂಬಲ ನಿಜಕ್ಕೂ ದೊಡ್ಡದಿದೆ. ಪ್ರಕಾಶ್ ಜೊತೆ ಇಡೀ ಕುಟುಂಬ ಮತ್ತು ಗೆಳೆಯರ ಬಳಗ ಇದೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರಿಗೆ ತಿರುಗೇಟು

ಪ್ರಕಾಶ್ ರೈ ನಾಮಪತ್ರ ಸಲ್ಲಿಸಿದ ಬಳಿಕ ಹೊರಬಂದ ಸಂದರ್ಭದಲ್ಲಿ ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿದರು. ಇದಕ್ಕೆ ವಿರುದ್ಧವಾಗಿ ಪ್ರಕಾಶ್ ರೈ ಬೇದಿ ಬೇದಿ ಎಂದು ಘೋಷಣೆಗಳನ್ನು ಕೂಗಿ, ಎಲ್ಲಿ 15 ಲಕ್ಷ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಗರಿಗೆ ತಿರುಗೇಟು ನೀಡಿದರು.

ನನಗೆ ಸಿನಿಮಾ ರಂಗದವರು ಪ್ರಚಾರಕ್ಕೆ ಬರಲೇಬೇಕು ಎಂಬ ಒತ್ತಾಯವಿಲ್ಲ. ನನ್ನ ಹಾಗೂ ಮತದಾರರ ನಡುವೆ ನಡೆಯುವ ಸಂವಾದ ಇದಾಗಿದೆ. ನಾನು ಯಾರ ಪ್ರತಿಸ್ಪರ್ಧಿಯೂ ಅಲ್ಲ. ಕಾಂಗ್ರೆಸ್ ಜಾತಿವಾದಿ ಪಕ್ಷವಾಗಿದೆ. ಕೇವಲ ಮುಸ್ಲಿಮ್, ದಲಿತರ ಪರ ಎಂದು ಹೇಳುತ್ತಾರೆ. ಬಿಜೆಪಿಯವರು ಸಾವಿನ ಮನೆಯಲ್ಲಿಯೂ ರಾಜಕೀಯ ಮಾಡಿ ಮೋದಿ ಎಂದು ಕೂಗುತ್ತಾರೆ. ಅದಕ್ಕೆ ಅರ್ಥವಿಲ್ಲ. ನಾನು ಗೆದ್ದರೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲಿಸಲ್ಲ.

-ಪ್ರಕಾಶ್ ರೈ, ಸ್ವತಂತ್ರ ಅಭ್ಯರ್ಥಿ, ಬೆಂಗಳೂರು ಕೇಂದ್ರ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಹುಭಾಷಾ ನಟ ಪ್ರಕಾಶ್ ರೈ ಶುಕ್ರವಾರ ನಾಮಪತ್ರ ಸಲ್ಲಿಸುವ ಮೊದಲು ತವಕ್ಕಲ್ ಮಸ್ತಾನ್ ದರ್ಗಾ, ವಿನಾಯಕ ದೇವಸ್ಥಾನ ಮತ್ತು ಸೈಂಟ್ ಫ್ರಾನ್ಸಿಸ್ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News