ರಾಜ್ಯದಲ್ಲಿ ಓಲಾ ಟ್ಯಾಕ್ಸಿ ಸೇವೆಗೆ 6 ತಿಂಗಳು ನಿಷೇಧ

Update: 2019-03-22 14:59 GMT

ಬೆಂಗಳೂರು, ಮಾ.22: ಕರ್ನಾಟಕ ಬೇಡಿಕೆ ಆಧಾರಿತ ವೆಬ್ ತಂತ್ರಜ್ಞಾನ, ಅಗ್ರಿಗೇಟರ್ ಅಧಿನಿಯಮ-2016ರ ನಿಯಮ ಉಲ್ಲಂಘಿಸಿದ ಆರೋಪದಡಿ ಓಲಾ ಕಂಪೆನಿಯ ಪರವಾನಿಗೆ(ಲೆಸನ್ಸ್) 6 ತಿಂಗಳುಗಳ ಕಾಲ ರದ್ದುಗೊಳಿಸಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ದೃಢಪಡಿಸಿದೆ.

ಈ ಸಂಬಂಧ ಮಾ.18ರಂದು ಆದೇಶ ಹೊರಡಿಸಿರುವ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ರದ್ದು ಆದೇಶ ಸ್ವೀಕರಿಸಿದ ದಿನಾಂಕದಿಂದ ಮೂರು ದಿನದೊಳಗೆ ಪರವಾನಿಗೆಯನ್ನು ಸಾರಿಗೆ ಪ್ರಾಧಿಕಾರಕ್ಕೆ ಒಪ್ಪಿಸುವಂತೆ ಜೊತೆಗೆ ತಕ್ಷಣವೇ ಆ್ಯಪ್ ಆಧಾರಿತ ಬೈಕ್, ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ.

ಏನಿದು ಪ್ರಕರಣ?: ಅನಿ ಟೆಕ್ನಾಲಜೀಸ್ ಕಂಪೆನಿ ಹೆಸರಿನಲ್ಲಿ ಓಲಾ ಕಂಪೆನಿಗೆ 2021 ಸಾಲಿನವರೆಗೆ ಪರವಾನಿಗೆ ನೀಡಲಾಗಿತ್ತು.

ಟ್ಯಾಕ್ಸಿಗಳನ್ನು ಓಡಿಸಲು ಮಾತ್ರ ಅನುಮತಿ ಇತ್ತು. ಆದರೆ, ಕಂಪೆನಿಯು ಬೈಕ್ ಟ್ಯಾಕ್ಸಿ ಆರಂಭಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದೆ. ಸಾರಿಗೆ ಇಲಾಖೆ ನೀಡಿದ ನೋಟಿಸ್‌ಗಳಿಗೆ ಸೂಕ್ತ ಉತ್ತರ ನೀಡದೆ ನಿರ್ಲಕ್ಷಿಸಿದೆ. ಹೀಗಾಗಿ, ಮುಂದಿನ ಆರು ತಿಂಗಳ ಅವಧಿಯವರೆಗೆ ಪರವಾನಿಗೆ ರದ್ದುಪಡಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ. ಇದರಿಂದ ಓಲಾ ಟ್ಯಾಕ್ಸಿ ಸೇವೆ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News