ಬೆಂಗಳೂರು ಕೇಂದ್ರ ಕ್ಷೇತ್ರ: ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ.ಮೋಹನ್ ನಾಮಪತ್ರ ಸಲ್ಲಿಕೆ

Update: 2019-03-22 14:33 GMT

ಬೆಂಗಳೂರು, ಮಾ.22: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಪಿ.ಸಿ.ಮೋಹನ್ ಶುಕ್ರವಾರ ಮರು ಆಯ್ಕೆ ಬಯಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಎರಡು ಬಾರಿ ಸಂಸದರಾಗಿರುವ ಪಿ.ಸಿ.ಮೋಹನ್ ನೂರಾರು ಬೆಂಬಲಿಗರೊಂದಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ಚುನಾವಣಾ ಕಚೇರಿಗೆ ಆಗಮಿಸಿದ ಅವರು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್ ಸೇರಿದಂತೆ ಮತ್ತಿತರ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದರು.

ಉಮೇದುವಾರಿಕೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಎರಡು ಬಾರಿ ಕ್ಷೇತ್ರದ ಜನರು ಅತ್ಯಂತ ವಿಶ್ವಾಸವನ್ನಿಟ್ಟು ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಬಗೆಯದಂತೆ ಕೆಲಸ ಮಾಡಿದ್ದೇನೆ. ಅದೇ ಧೈರ್ಯದಿಂದ ಮೂರನೇ ಅವಧಿಗೆ ಪುನರ್ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದೇನೆ. ಹೆಚ್ಚಿನ ಮತಗಳ ಅಂತರದಿಂದ ನಾನು ಮರು ಆಯ್ಕೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಯುಪಿಎ ಸರಕಾರದ ಹಗರಣಗಳನ್ನಿಟ್ಟುಕೊಂಡು ಚುನಾವಣೆ ಎದುರಿಸಿದ್ದೆವು. ಈ ಬಾರಿಯು ಕಾಂಗ್ರೆಸ್‌ನ 70 ವರ್ಷಗಳ ಸಾಧನೆ ಹಾಗೂ ಮೋದಿಯ ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ. ಕೇಂದ್ರದಿಂದ ವರ್ತುಲ ರೈಲ್ವೆ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಲ್ಲಿ ಶ್ರಮಿಸಿದ್ದೇನೆ. ನಾನು ಮರು ಆಯ್ಕೆ ಖಚಿತ ಎಂದು ನುಡಿದರು.

ಬಾಕ್ಸ್...

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಹುಭಾಷ ನಟ ಪ್ರಕಾಶ್ ರೈ ಕಾಂಗ್ರೆಸ್ ಬೆಂಬಲ ನೀಡುವಂತೆ ಬಹಿರಂಗವಾಗಿಯೇ ಹೇಳಿದ್ದರು. ಹೀಗಾಗಿ, ಪ್ರಕಾಶ್ ರೈ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದಾರೆ.

-ಪಿ.ಸಿ.ಮೋಹನ್, ಬಿಜೆಪಿ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News