ವಿದ್ಯಾರ್ಥಿಗೊಂದು ಗಿಡ ಕಡ್ಡಾಯಗೊಳಿಸಿ: ಸಾಲುಮರದ ತಿಮ್ಮಕ್ಕ

Update: 2019-03-22 14:46 GMT

ಬೆಂಗಳೂರು, ಮಾ.22: ರಾಜ್ಯ ಸರಕಾರವು ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಪ್ರೌಢಶಾಲಾ ಮಕ್ಕಳಿಗೆ ಒಂದು ಗಿಡ ಬೆಳೆಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಪದ್ಮಶ್ರೀ ಪುರಸ್ಕೃತೆ ನಾಡೋಜ ಸಾಲುಮರದ ತಿಮ್ಮಕ್ಕ ಇಂದಿಲ್ಲಿ ಒತ್ತಾಯ ಮಾಡಿದರು.

ಶುಕ್ರವಾರ ನಗರದ ಎಂಜಿ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಸೌಪರ್ಣಿಕಾ ಸಂಸ್ಥೆಯ ಸಹಯೋಗದೊಂದಿಗೆ ದಕ್ಷಿಣ ಭಾರತದಲ್ಲಿ 10 ಸಾವಿರ ಗಿಡಗಳನ್ನು ಬೆಳೆಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳಲ್ಲಿ ಪರಿಸರದ ಪ್ರೀತಿ, ಪರಿಸರ ಸ್ನೇಹಿ ಸ್ವಭಾವವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಂದು ಗಿಡ ನೆಟ್ಟು ಬೆಳೆಸಲಿ. ಜೊತೆಗೆ ಗಿಡ ಬೆಳೆಸಿದ್ದಕ್ಕೆ ಶಿಕ್ಷಣ ಇಲಾಖೆ ಮಕ್ಕಳಿಗೆ ಅಂಕಗಳನ್ನು ನೀಡಬೇಕು. ಆಗ, ಮಾತ್ರ ಹಸಿರು ವಾತಾವರಣ ನಿರ್ಮಾಣ ಮಾಡಬಹುದು ಎಂದು ನುಡಿದರು.

ಸಣ್ಣವರಿರಲಿ, ದೊಡ್ಡವರಿರಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು. ಮನೆ ಮುಂದೆ ಜಾಗ ಇಲ್ಲದೇ ಇದ್ದರೆ ರಸ್ತೆ ಬದಿಯಲ್ಲಿ ನೆಟ್ಟು ಬೆಳೆಸಿ ಎಂದ ಅವರು, ನನಗೆ ಮದುವೆಯಾಗಿ 20 ವರ್ಷ ಕಳೆದರೂ ಮಕ್ಕಳಾಗಲಿಲ್ಲ. ಅದಕ್ಕೆ ನಾನು ಮತ್ತು ಪತಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದೆವು. ಬೆಳಗ್ಗೆ ಕೆಲಸಕ್ಕೆ ಹೋಗುವ ಮೊದಲು ಎಲ್ಲ ಗಿಡಗಳಿಗೆ ನೀರು ಎರೆಯುತ್ತಿದ್ದೆವು ಎಂದು ನೆನೆದರು.

ನಾನೇ ನೆಟ್ಟಿದ್ದ ಮರವೊಂದಕ್ಕೆ ಈಗ 72ರ ವಯಸ್ಸು. ನಾನೇ ಬೆಳೆಸಿದ ಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ ಕಲರವ ನಿತ್ಯ ಕೇಳಿಬರುತ್ತಿದೆ. ಅದನ್ನು ಕೇಳುವುದೇ ನನಗೆ ಆನಂದ. ಅನೇಕ ಪಾದಚಾರಿಗಳಿಗೆ ನೆರಳಿನ ಆಶ್ರಯವಾಗಿರುವುದು ತೃಪ್ತಿ ತಂದಿದೆ ಎಂದು ತಿಮ್ಮಕ್ಕ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅನಂತ ಲಕ್ಷ್ಮೀ, ಊರ್ಮಿಳಾ ಚನಾನ್, ಸೌಪರ್ಣಿಕಾ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ರಾಜ ಮುಖರ್ಜಿ ಸೇರಿ ಪ್ರಮುಖರಿದ್ದರು.

ಬದುಕಿರುವಾಗಲೇ ಆಸ್ಪತ್ರೆ ಕಟ್ಟಿಸಿ

ನನ್ನೂರು ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಬೇಕೆಂಬ 14 ವರ್ಷಗಳ ಬೇಡಿಕೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನನಗೆ ವೃದ್ಧಾಪ್ಯ ವೇತನ ಬಿಟ್ಟರೆ ಸರಕಾರದಿಂದ ಯಾವ ನೆರವೂ ಸಿಕ್ಕಿಲ್ಲ. ನಾನು ಬದುಕಿರುವಾಗಲೇ ನನ್ನೂರಿನಲ್ಲೊಂದು ಹೆರಿಗೆ ಆಸ್ಪತ್ರೆ ಕಟ್ಟಿಸಬೇಕು.

-ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಪುರಸ್ಕೃತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News