ಎರಡು ಕೋಟಿಗೂ ಅಧಿಕ ಮಹಿಳೆಯರಿಗೆ ಮತದಾನದ ಹಕ್ಕು ಇಲ್ಲ, ಏಕೆ ಗೊತ್ತೇ?

Update: 2019-03-23 04:37 GMT
ಸಾಂದರ್ಭಿಕ ಚಿತ್ರ

ವಾರಣಾಸಿ, ಮಾ.23: ಈ ಬಾರಿಯ ಸಾರ್ವತ್ರಿಕ ಚುನಾವಣೆ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಅಧಿಕವಾಗಿದೆ. ಆದರೂ ಈ ಸಂಖ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಕಳವಳಕಾರಿ ಚಿತ್ರಣ ತೆರೆದಿಡುತ್ತದೆ.

ಇಡೀ ಶ್ರೀಲಂಕಾದ ಜನಸಂಖ್ಯೆಯಷ್ಟು ಅಂದರೆ ಸುಮಾರು ಎರಡು ಕೋಟಿ ಮಹಿಳೆಯರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದಾರೆ. 2011ರ ಜನಗಣತಿ ಪ್ರಕಾರ, ಭಾರತದಲ್ಲಿ 2019ರಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರ ಸಂಖ್ಯೆ 451 ದಶಲಕ್ಷ ಇರಬೇಕಿತ್ತು. ಆದರೆ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವ ಮಹಿಳೆಯರ ಸಂಖ್ಯೆ ಕೇವಲ 430 ದಶಲಕ್ಷ. ಅಂದರೆ 21 ದಶಲಕ್ಷ ಅಂತರ ಇದೆ. ಅಂದರೆ ಹರ್ಯಾಣ ಅಥವಾ ಕೇರಳ ರಾಜ್ಯದಲ್ಲಿ ಇರುವಷ್ಟು ಸಂಖ್ಯೆಯ ಮಹಿಳೆಯರಿಗೆ ಮತದಾನದ ಹಕ್ಕು ನಿರಾಕರಿಸಲಾಗಿದೆ!

ಅಂದರೆ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 30 ಸಾವಿರ ಮಹಿಳೆಯರು ಮತಹಕ್ಕಿನಿಂದ ವಂಚಿತರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಸಮಸ್ಯೆ ತೀವ್ರ. ಈ ದೈತ್ಯ ರಾಜ್ಯದಲ್ಲಿ ಪ್ರತಿ ಕ್ಷೇತ್ರದಲ್ಲಿ ಸರಾಸರಿ 85 ಸಾವಿರ ಮಹಿಳೆಯರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಭಾರತದ ಒಟ್ಟು ಮತದಾರರ ಸಂಖ್ಯೆಗೆ ಹೋಲಿಸಿದರೆ ಶೇಕಡ 8ರಷ್ಟು ಮಂದಿಗೆ ಮತದಾನದ ಅವಕಾಶ ಇಲ್ಲವಾಗಿದೆ.

ಇದಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯವಾದಿ ವ್ಯವಸ್ಥೆ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ದಕ್ಷಿಣ ಭಾರತದಲ್ಲಿ ಸಾಕ್ಷರತೆ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳು ಉತ್ತರಕ್ಕಿಂತ ಅಧಿಕವಾಗಿರುವುದರಿಂದ ಈ ಸಮಸ್ಯೆ ಕಡಿಮೆ ಎನ್ನುವುದು ಅವರ ವಿಶ್ಲೇಷಣೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News