ಬುರ್ಜ್ ಖಲೀಫಾದಲ್ಲಿ ನ್ಯೂಝಿಲೆಂಡ್ ಪ್ರಧಾನಿಯ ಚಿತ್ರ !

Update: 2019-03-23 09:05 GMT

ದುಬೈ, ಮಾ.23: ನ್ಯೂಝಿಲೆಂಡ್ ದೇಶದ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳಲ್ಲಿ ಇತ್ತೀಚೆಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಕನಿಷ್ಠ 49 ಮಂದಿ ಬಲಿಯಾದ ದುರಂತದ ನಂತರ ಮುಸ್ಲಿಂ ಸಮುದಾಯಕ್ಕೆ ಅಪಾರ ಅನುಕಂಪ ತೋರಿಸಿ ಈ ಕಷ್ಟಕರ ಸಮಯದಲ್ಲಿ ಅವರ ಹೆಗಲಿಗೆ ಹೆಗಲು ಕೊಟ್ಟು ನಿಂತ ಆ ದೇಶದ ಪ್ರಧಾನಿ ಜೆಸಿಂಡ ಅರ್ಡರ್ನ್ ಅವರಿಗೆ ಸಂಯುಕ್ತ ಅರಬ್ ಸಂಸ್ಥಾನದ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ದುಬೈಯಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ನ್ಯೂಝಿಲೆಂಡ್ ಪ್ರಧಾನಿಯ ಚಿತ್ರವನ್ನೂ ಬಿಂಬಿಸುವ ಮೂಲಕ ಅವರಿಗೆ ದೇಶ ಕೃತಜ್ಞತೆ ಅರ್ಪಿಸಿದೆ. ಈ ದೃಶ್ಯದ ಚಿತ್ರವೊದನ್ನು ರಶೀದ್ ಅಲ್ ಮಖ್ತೂಮ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಮುಸ್ಲಿಂ ಸಮುದಾಯಕ್ಕೆ ಜೆಸಿಂಡಾ ತೋರಿದ ಆದರಾಭಿಮಾನ ಮತ್ತು ಬೆಂಬಲಕ್ಕೆ ಅವರಿಗೆ ಮತ್ತೊಮ್ಮೆ ತಮ್ಮ ಧನ್ಯವಾದ ತಿಳಿಸಿದ್ದಾರೆ.

‘‘ಮಸೀದಿ ದಾಳಿಯ ಹುತಾತ್ಮರ ಗೌರವಾರ್ಥ ಇಂದು ನ್ಯೂಝಿಲೆಂಡ್ ಮೌನವಾಗಿದೆ. ವಿಶ್ವಾದ್ಯಂತ ಮುಸ್ಲಿಂ ಸಮುದಾಯವನ್ನು ನಡುಗಿಸಿದ ಈ ಉಗ್ರ ದಾಳಿಯ ನಂತರ ನೀವು ತೋರಿಸಿದ ಅನುಕಂಪ ಹಾಗೂ ಬೆಂಬಲ 1.5 ಬಿಲಿಯನ್ ಮುಸ್ಲಿಮರ ಗೌರವ ಪಡೆದಿದೆ. ಪ್ರಧಾನಿ ಜೆಸಿಂಡ ಮತ್ತು ನ್ಯೂಝಿಲೆಂಡ್ ಗೆ ಧನ್ಯವಾದಗಳು’’ ಎಂದು ಶೇಖ್ ಮುಹಮ್ಮದ್ ಅವರ ಟ್ವೀಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News