ಲೋಹಿಯಾ ಇದ್ದಿದ್ದರೆ ಎನ್‍ ಡಿಎ ಸರಕಾರದ ಬಗ್ಗೆ ಹೆಮ್ಮೆ ಪಡುತ್ತಿದ್ದರು: ಪ್ರಧಾನಿ ಮೋದಿ

Update: 2019-03-23 10:02 GMT

ಹೊಸದಿಲ್ಲಿ, ಮಾ.23: ಖ್ಯಾತ ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರನ್ನು ಸ್ಮರಿಸಿ ಬ್ಲಾಗ್ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಲೋಹಿಯಾ ಈಗ ಇದ್ದಿದ್ದರೆ ಅವರು ಎನ್ ಡಿಎ ಸರಕಾರದ ಕೆಲಸ ನೋಡಿ ಬಹಳ ಹೆಮ್ಮೆ ಪಡುತ್ತಿದ್ದರು. ಆದರೆ ತಮ್ಮ `ಅನುಯಾಯಿಗಳು' ದೇಶದ ಬದಲು ತಮ್ಮ ಕುಟುಂಬದ  ಬಗ್ಗೆಯೇ ಮೊದಲು ಯೋಚಿಸುವುದನ್ನು ಕಂಡು ದಂಗಾಗುತ್ತಿದ್ದರು ಎಂದು ಬರೆದಿದ್ದಾರೆ.

“ಜಾತೀಯತೆ ಹಾಗೂ ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನತೆ ಡಾ. ಲೋಹಿಯಾ ಅವರಿಗೆ ಬಹಳ ನೋವುಂಟು ಮಾಡುತ್ತಿತ್ತು. ನಮ್ಮ ಮಂತ್ರ `ಸಬ್ ಕಾ ಸಾಥ್, ಸಬ್ ಕಾ ವಿಕಾಸ್’. ಕಳೆದ ಐದು ವರ್ಷಗಳ ನಮ್ಮ ಕೆಲಸ ಕಾರ್ಯಗಳಿಂದ ಡಾ ಲೋಹಿಯಾ ಅವರ  ಕನಸುಗಳನ್ನು ಈಡೇರಿಸಲು ನಾವು ಬಹಳಷ್ಟು ಕೊಡುಗೆ ನೀಡಿದ್ದೇವೆ ಎಂಬುದನ್ನು ತೋರಿಸುತ್ತದೆ. ಅವರು ಖಂಡಿತವಾಗಿಯೂ ಎನ್‍ ಡಿಎ ಸರಕಾರದ ಕೆಲಸದಿಂದ ಹೆಮ್ಮೆ ಪಡುತ್ತಿದ್ದರು'' ಎಂದು ಪ್ರಧಾನಿಯ ಬ್ಲಾಗ್ ನಲ್ಲಿ ಬರೆಯಲಾಗಿದೆ.

“ಡಾ.ಲೋಹಿಯಾ ಸಂಸತ್ತಿನ ಒಳಗೆ ಮತ್ತು ಹೊರಗೆ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಭಯದಿಂದ ನಡುಗುತ್ತಿತ್ತು. ಕಾಂಗ್ರೆಸ್ ಆಳ್ವಿಕೆಯ ಸಂದರ್ಭ ಕೃಷಿ, ಕೈಗಾರಿಕೆ ಯಾ ಸೇನೆಯಲ್ಲಿ ಸುಧಾರಣೆಯಾಗಿರಲಿಲ್ಲ ಎಂದು ಲೋಹಿಯಾ 1962ರಲ್ಲಿ ಹೇಳಿದ್ದರು. ಕಾಂಗ್ರೆಸ್ ವಿರೋಧಿತ್ವ ಡಾ. ಲೋಹಿಯಾ ಅವರ ಹೃದಯ ಮತ್ತು ಆತ್ಮವಾಗಿತ್ತು'' ಎಂದು ಬರೆದಿರುವ ಪ್ರಧಾನಿ, “ಲೋಹಿಯಾ ಅವರ ಶ್ರಮದಿಂದಾಗಿ ಒಂದೇ ಒಂದು ಕಾಂಗ್ರೆಸ್ ರಾಜ್ಯವನ್ನು ದಾಟದೆ ಹೌರಾ-ಅಮೃತಸರ್ ಮೈಲ್ ನಲ್ಲಿ ಸಂಚರಿಸಬಹುದಾಗಿದೆ'' ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾತುಗಳನ್ನು ಉಲ್ಲೇಖಿಸಿದ್ದಾರೆ.

“ಆದರೆ ದುರದೃಷ್ಟವಶಾತ್ ಇಂದಿನ ರಾಜಕೀಯ ಬೆಳವಣಿಗೆಗಳನ್ನು ಕಂಡು ಡಾ. ಲೋಹಿಯಾ ಹೌಹಾರುತ್ತಿದ್ದರು. ಲೋಹಿಯಾ ಅವರಿಂದ ಸ್ಫೂರ್ತಿ ಪಡೆದಿದ್ದೇವೆ ಎಂದು ಹೇಳುವ ಪಕ್ಷಗಳು ಅವರ ಸಿದ್ಧಾಂತಗಳನ್ನು ತ್ಯಜಿಸಿವೆ, ಅವರನ್ನು ಅವಮಾನಿಸುವ ಯಾವುದೇ ಅವಕಾಶವನ್ನು ಅವರು ಕೈಬಿಡುವುದಿಲ್ಲ. ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ವಿನಾಶಕಾರಿ ಎಂದು ಡಾ. ಲೋಹಿಯಾ ಯಾವತ್ತೂ ನಂಬಿದ್ದರು. ಡಾ. ಲೋಹಿಯಾ ಅವರ ತತ್ವಗಳಿಗೆ ಅವರು ಇಂದು ದ್ರೋಹವೆಸಗುತ್ತಿದ್ದಾರೆ. ನಾಳೆ ಅವರು ಭಾರತದ ಜನರಿಗೂ ದ್ರೋಹವೆಸಗುತ್ತಾರೆ'' ಎಂದು ಪ್ರಧಾನಿ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News