ಮಲ್ಯನ ಬೆಂಗಳೂರು ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ದಿಲ್ಲಿ ನ್ಯಾಯಾಲಯ ಆದೇಶ

Update: 2019-03-23 17:39 GMT

ಹೊಸದಿಲ್ಲಿ, ಮಾ. 23: ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಎಪ್‌ಇಆರ್‌ಎ) ಉಲ್ಲಂಘನೆಗಳ ಪ್ರಕರಣಕ್ಕೆ ಸಂಬಂಧಿಸಿ ಮದ್ಯದ ದೊರೆ ವಿಜಯ ಮಲ್ಯನ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದಿಲ್ಲಿ ನ್ಯಾಯಾಲಯ ಆದೇಶಿಸಿದೆ.

ಎಫ್‌ಇಆರ್‌ಎ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದಿನ ಆದೇಶವನ್ನು ಕಾರ್ಯರೂಪಕ್ಕೆ ತರಲು ಇನ್ನಷ್ಟು ಸಮಯಾವಕಾಶ ಬೇಕು ಎಂದು ಜಾರಿ ನಿದೇಶನಾಲಯದ ವಿಶೇಷ ಸರಕಾರಿ ವಕೀಲರಾದ ಎನ್.ಕೆ. ಮಟ್ಟಾ ಹಾಗೂ ಸಾಮ್‌ವೇದ್ನ ವರ್ಮಾ ಅವರ ಮೂಲಕ ಬೆಂಗಳೂರು ಪೊಲೀಸರು ಮನವಿ ಮಾಡಿದ ಬಳಿಕ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆರಾವತ್ ಅವರು ಈ ಹೊಸ ನಿರ್ದೇಶನ ನೀಡಿದ್ದಾರೆ.

ಮುಂದಿನ ವಿಚಾರಣೆ ನಡೆಯಲಿರುವ ಜುಲೈ 10ರ ಒಳಗೆ ಮಲ್ಯನ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಮಲ್ಯಗೆ ಸೇರಿದ 156 ಸೊತ್ತುಗಳನ್ನು ಗುರುತಿಸಲಾಗಿದೆ. ಆದರೆ, ಇದರಲ್ಲಿ ಯಾವುದೊಂದನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೆಂಗಳೂರು ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಈ ಪ್ರಕರಣದಲ್ಲಿ ಮಲ್ಯನ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಕಳೆದ ವರ್ಷ ಮೇ 8ರಂದು ಬೆಂಗಳೂರು ಪೊಲೀಸ್ ಕಮಿಷನರ್‌ರಿಗೆ ನಿರ್ದೇಶನ ನೀಡಿತ್ತು ಹಾಗೂ ಅದರ ಬಗ್ಗೆ ವರದಿ ಕೋರಿತ್ತು.

ಹಲವು ಬಾರಿ ಸಮನ್ಸ್ ಕಳುಹಿಸಿದರೂ ಹಾಜರಾಗದೇ ಇರುವುದನ್ನು ಗುರುತಿಸಿರುವ ನ್ಯಾಯಾಲಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ನೀಡಿದ್ದ ಸಮನ್ಸ್‌ನಿಂದ ತಪ್ಪಿಸಿಕೊಂಡಿರುವುದಕ್ಕೆ ಮಲ್ಯನನ್ನು ಘೋಷಿದ ಅಪರಾಧಿ ಎಂದು ಪ್ರಕಟಿಸಿದೆ. 2017 ಎಪ್ರಿಲ್ 12ರಂದು ಮಲ್ಯನ ವಿರುದ್ಧ ನ್ಯಾಯಾಲಯ ಓಪನ್ ಎಂಡೆಂಡ್ ಜಾಮೀನು ರಹಿತ ಬಂಧನಾದೇಶ ಜಾರಿಗೊಳಿಸಿತ್ತು. ಇದು ಜಾಮೀನು ರಹಿತ ಬಂದನಾದೇಶದಂತೆ ಅಲ್ಲ. ಓಪನ್ ಎಂಡೆಡ್ ಜಾಮೀನು ರಹಿತ ಬಂಧನಾದೇಶದಲ್ಲಿ ಆದೇಶ ಯಾವುದೇ ಸಮಯದ ಮಿತಿ ಹೊಂದಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News