ಭಾರತ ಶುಭಾರಂಭ; ಏಶ್ಯನ್ ಚಾಂಪಿಯನ್ ಜಪಾನ್ ವಿರುದ್ಧ ಜಯ

Update: 2019-03-23 19:00 GMT

ಇಪೋ(ಮಲೇಶ್ಯಾ), ಮಾ.23: ಮಲೇಶ್ಯಾದ ಇಪೋದಲ್ಲಿ ಶನಿವಾರ ಆರಂಭವಾದ ಸುಲ್ತಾನ್ ಅಝ್ಲಾನ್ ಶಾ ಹಾಕಿ ಕಪ್‌ನ ಮೊದಲ ಪಂದ್ಯದಲ್ಲಿ ಏಶ್ಯನ್ ಚಾಂಪಿಯನ್ ಜಪಾನ್ ತಂಡವನ್ನು 2-0 ಅಂತರದಿಂದ ಮಣಿಸಿರುವ ಭಾರತ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಹಿರಿಯ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದ ಕಾರಣ ಭಾರತ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಯುವ ಆಟಗಾರರು ಗಮನ ಸೆಳೆದಿದ್ದಾರೆ.

ವರುಣ್ ಕುಮಾರ್ 24ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 55ನೇ ನಿಮಿಷದಲ್ಲಿ ನಾಯಕ ಮನ್‌ಪ್ರೀತ್ ಸಿಂಗ್ ನೀಡಿದ ಪಾಸ್ ನೆರವಿನಿಂದ ಫೀಲ್ಡ್ ಗೋಲು ದಾಖಲಿಸಿದ ಸಿಮ್ರಾನ್‌ಜೀತ್ ಸಿಂಗ್ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಭಾರತ ರವಿವಾರ ನಡೆಯಲಿರುವ ತನ್ನ ಮುಂದಿನ ಲೀಗ್ ಪಂದ್ಯದಲ್ಲಿ ಕೊರಿಯಾವನ್ನು ಎದುರಿಸಲಿದೆ. ಆ ಬಳಿಕ ಆತಿಥೇಯ ಮಲೇಶ್ಯಾ(ಮಾ.26), ಕೆನಡಾ(ಮಾ.27) ಹಾಗೂ ಪೊಲ್ಯಾಂಡ್(ಮಾ.29)ತಂಡಗಳನ್ನು ಎದುರಿಸಲಿದೆ.

ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಮಾ.30 ರಂದು ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ನಾಯಕ ಮನ್‌ಪ್ರೀತ್ ಹಾಗೂ ಕೊಥಜಿತ್ ಸಿಂಗ್ ಮುಂದಾಳತ್ವದ ಭಾರತದ ಮಿಡ್‌ಫೀಲ್ಡ್ ವಿಭಾಗ ಹಲವು ಬಾರಿ ಗೋಲು ಗಳಿಸುವ ಅವಕಾಶವನ್ನು ಸೃಷ್ಟಿಸಿತು. ಆದರೆ, ಫಾರ್ವರ್ಡ್ ಆಟಗಾರರು ತಪ್ಪೆಸಗಿ ಅವಕಾಶವನ್ನು ವ್ಯರ್ಥ ಮಾಡಿದರು.

ಜಪಾನ್ ತಂಡ 33ನೇ ನಿಮಿಷದಲ್ಲಿ ಮೊದಲ ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಭಾರತದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಗೋಲು ನಿರಾಕರಿಸಿದರು. ಮೋಡ ಕವಿದ ವಾತಾವರಣದಲ್ಲಿ ಸುಮಾರು 28 ಡಿಗ್ರಿ ಉಷ್ಣಾಂಶದಲ್ಲಿ ಭಾರತ ಎರಡನೇ ಗೋಲಿಗಾಗಿ ಹುಡುಕಾಟ ಮುಂದುವರಿಸಿ ನಾಲ್ಕನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಗಿಟ್ಟಿಸಿಕೊಂಡಿತು.ಆದರೆ, ಈ ಬಾರಿ ವರುಣ್ ಗುರಿ ಪ್ಪಿದರು. ಜಪಾನ್ ಪ್ರತಿ ದಾಳಿ ನಡೆಸಲು ಅವಕಾಶ ನೀಡಿದರು.

ಜಪಾನ್ 55ನೇ ನಿಮಿಷದಲ್ಲಿ ಗೋಲ್‌ಕೀಪರ್‌ರನ್ನು ಕಣದಿಂದ ಹಿಂದಕ್ಕೆ ಕರೆಸಿ ಹೆಚ್ಚುವರಿ ಆಟಗಾರನನ್ನು ಇಳಿಸಿತು. ಆದರೆ, ಜಪಾನ್‌ನ ಈ ತಂತ್ರ ತಿರುಗುಬಾಣವಾಯಿತು.ಭಾರತ ಅವಕಾಶವನ್ನು ಸಂಪೂರ್ಣ ಬಳಸಿಕೊಂಡು ತನ್ನ ಮುನ್ನಡೆಯನ್ನು ದ್ವಿಗುಣಗೊಳಿಸಿತು.

 ಸಿಮ್ರಾನ್‌ಜೀತ್ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಡುವಲ್ಲಿ ಯಶಸ್ವಿಯಾದರು. ಪಂದ್ಯ ಕೊನೆಗೊಳ್ಳಲು ಎರಡು ನಿಮಿಷ ಬಾಕಿ ಇರುವಾಗ ಜಪಾನ್ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದು, ಸುರೇಂದ್ರ ಕುಮಾರ್, ದ್ವಿತೀಯಾರ್ಧದಲ್ಲಿ ಶ್ರೀಜೇಶ್ ಬದಲಿಗೆ ಬಂದ ಗೋಲ್‌ಕೀಪರ್ ಕೃಷ್ಣ ಪಾಠಕ್ ಈ ಪ್ರಯತ್ನವನ್ನು ವಿಫಲಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News