ಭಾರತಕ್ಕೆ ಮಾಡು ಮಡಿ ಪಂದ್ಯ ತಝಕಿಸ್ತಾನ ಎದುರಾಳಿ

Update: 2019-03-23 19:05 GMT

ತಾಷ್ಕೆಂಟ್, ಮಾ.23: ಪ್ರಥಮ ಪಂದ್ಯದಲ್ಲಿನ ಸೋಲಿನ ಹತಾಶೆಯನ್ನು ಅಳಿಸಿ ಹಾಕುವ ನಿರೀಕ್ಷೆಯಲ್ಲ್ಲಿ ಭಾರತ ಅಂಡರ್-13 ಫುಟ್ಬಾಲ್ ತಂಡ ತನ್ನ ಎರಡನೇ (ಮಾಡು ಮಡಿ) ಪಂದ್ಯದಲ್ಲಿ ರವಿವಾರ ತಝಕಿಸ್ತಾನವನ್ನು ಎದುರಿಸಲಿದೆ.

ತನ ಪ್ರಥಮ ಪಂದ್ಯದಲ್ಲಿ ಭಾರತ ಹಾಲಿ ಚಾಂಪಿಯನ್ ಉಝ್ಬೇಕಿಸ್ತಾನಕ್ಕೆ ಶರಣಾಗಿತ್ತು.

‘‘ಇದೊಂದು ನಮಗೆ ನಿರ್ಣಾಯಕ ಪಂದ್ಯ. ಟೂರ್ನಿಯಲ್ಲಿ ನಾವು ಉಳಿದುಕೊಳ್ಳಲು ಗೆಲುವು ಅತ್ಯಂತ ಅವಶ್ಯವಾಗಿದೆ. ಇದನ್ನು ಮಾಡು ಇಲ್ಲವೇ ಮಡಿ ಪಂದ್ಯ ಎಂದು ಕರೆಯಬಹುದು. ನಾವು ಉತ್ತಮ ಪ್ರದರ್ಶನ ನೀಡಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಫಲಿತಾಂಶ ಏನಾಗುತ್ತದೋ ಕಾದು ನೋಡೋಣ’’ ಎಂದು ಭಾರತ ತಂಡದ ಮುಖ್ಯ ಕೋಚ್ ಡೆರಿಕ್ ಪೆರೇರ ಹೇಳಿದ್ದಾರೆ.

ಉಝ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ 45 ನಿಮಿಷಗಳವರೆಗೆ ದಿಟ್ಟ ಹೋರಾಟ ನೀಡಿದ್ದ ಭಾರತದ ಹುಡುಗರು ತರುವಾಯ 0-3 ಗೋಲುಗಳ ಅಂತರದಿಂದ ಎದುರಾಳಿಗೆ ಮಣಿದಿದ್ದರು. ‘‘ಅನನುಭವ ಕೂಡ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಉಝ್ಬೇಕಿಸ್ತಾನ ಆಟಗಾರರು ದೈಹಿಕವಾಗಿ ಬಲಿಷ್ಠರು ಹಾಗೂ ತಾಂತ್ರಿಕವಾಗಿ ನಮಗಿಂತ ಉತ್ತಮರು. ಪ್ರಥಮಾರ್ಧದಲ್ಲಿ ನಾವು ಎರಡು ಬಾರಿ ಗೋಲು ಗಳಿಸುವ ಅವಕಾಶ ಪಡೆದಿದ್ದೆವು. ಅವೆರಡೂ ಗೋಲಾಗಿ ಪರಿವರ್ತಿತವಾಗಿದ್ದರೆ ನಮಗೆ ಮುನ್ನಡೆ ಸಿಗುತ್ತಿತ್ತು’’ ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಇತರ ಕ್ವಾಲಿಫೈಯರ್ಸ್ ಗುಂಪುಗಳ ಪೈಕಿ, ಎಫ್ ಗುಂಪು ಮೂರು ತಂಡಗಳನ್ನು ಮಾತ್ರ ಒಳಗೊಂಡಿದೆ. ಫೈನಲ್ಸ್‌ನಲ್ಲಿ ಸ್ಥಾನ ಪಡೆಯಲು ಈ ಗುಂಪಿನಲ್ಲಿ ಪ್ರತೀ ಪಂದ್ಯವೂ ನಿರ್ಣಾಯಕವಾಗಿರುತ್ತದೆ. ಈ ಟೂರ್ನಿಯು ಮುಂದಿನ ವರ್ಷ ಥಾಯ್ಲೆಂಡ್‌ನಲ್ಲಿ ನಡೆಯಲಿದೆ.

ಭಾರತ ತಂಡದ ನಾಯಕನ ಜವಾಬ್ದಾರಿ ಹೊತ್ತಿರುವ ವಿನಿತ್ ರಾಯ್ ಮಾತನಾಡಿ, ‘‘ತಝಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಮೂಲಕ ಟೂರ್ನಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಗುರಿ ಇರಿಸಿಕೊಂಡಿದ್ದೇವೆ’’ ಎಂದು ತಿಳಿಸಿದ್ದಾರೆ.

ಪಂದ್ಯವು ಭಾರತೀಯ ಕಾಲಮಾನ ಸಾಯಂಕಾಲ 5:30ಕ್ಕೆ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News