ಕ್ಷಯ ಅಕ್ಷಯವಾಗಲು ಏನು ಕಾರಣ?

Update: 2019-03-23 19:08 GMT

ರೋಗ ಪತ್ತೆಯಾಗುವುದಕ್ಕೂ ಮೊದಲು ಕೆಲವು ರೋಗಿಗಳು ಅನೇಕ ಖಾಸಗಿ ವೈದ್ಯರು, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳನ್ನು ಸುತ್ತಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಮೊದಲೇ ಚಿಕಿತ್ಸೆ ನೀಡಲಾಗಿದ್ದ ಓರ್ವ ಮಹಿಳೆಯಲ್ಲಿ ಮತ್ತೆ ಕ್ಷಯರೋಗ ಕಾಣಿಸಿಕೊಂಡಿರಬಹುದು ಎನ್ನುವುದನ್ನು ಪತ್ತೆ ಮಾಡುವಲ್ಲೂ ಒಬ್ಬ ವೈದ್ಯರು ವಿಫಲವಾಗಿದ್ದಾರೆ. ಬಹುತೇಕ ಒಂದು ವರ್ಷಗಳ ಕಾಲ ಹಲವು ಖಾಸಗಿ ವೈದ್ಯರನ್ನು/ಆಸ್ಪತ್ರೆಗಳನ್ನು ತಿರುಗಾಡಿದ ನಂತರ ಆಕೆಗೆ ಎಕ್ಸ್‌ಡಿಆರ್ ಟಿಬಿ ಇರುವುದು ಪತ್ತೆಯಾಗಿದೆ.

ಭಾರತದಲ್ಲಿ ಔಷಧಿ ಪ್ರತಿರೋಧ ಕ್ಷಯ (ಡಿಆರ್-ಟಿಬಿ) ರೋಗಿಗಳಲ್ಲಿ ರೋಗಪತ್ತೆ ವಿಳಂಬವಾಗಿ ಸಾಧ್ಯವಾಗುತ್ತಿದೆ ಮತ್ತು ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಭಿನ್ನ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ ಹಾಗೂ ಅನಿಯಂತ್ರಿತ ಆರೋಗ್ಯಸೇವಾ ಕ್ಷೇತ್ರದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಒಂದೇ ರೀತಿಯ ಚಿಕಿತ್ಸೆಗೆ ವಿಭಿನ್ನ ದರಗಳನ್ನು ನೀಡಲಾಗಿದೆ ಎಂದು ವಿಜ್ಞಾನ ಪತ್ರಿಕೆ ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್ (ಪಿಎಲ್‌ಒಎಸ್)ನಲ್ಲಿ ಪ್ರಕಟವಾಗಿರುವ ಜನವರಿ 2019ರ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಇಂಡಿಯಾಸ್ಪೆಂಡ್ ತನ್ನ ಜನವರಿ 2019ರ ವರದಿಯಲ್ಲಿ ತಿಳಿಸಿರುವ ಪ್ರಕಾರ, 2017ರಲ್ಲಿ ಜಾಗತಿಕ 2.7 ಮಿಲಿಯನ್ ಟಿಬಿ ಪ್ರಕರಣಗಳಲ್ಲಿ ಭಾರತದ ಪಾಲು ಅತೀಹೆಚ್ಚು (ಶೇ.27) ಆಗಿತ್ತು ಮತ್ತು ಈ ರೋಗದಿಂದ ಮೃತಪಟ್ಟವರ ಪೈಕಿ ಶೇ. 32 (4,21,000) ರೋಗಿಗಳು ಭಾರತದವರಾಗಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಕ್ಷಯರೋಗ ವಿರೋಧಿ ಔಷಧಿ ಪ್ರತಿರೋಧ ಸಮೀಕ್ಷೆ, 2016ರ ಪ್ರಕಾರ, ವಾರ್ಷಿಕ ಅಂದಾಜು 2.79 ಮಿಲಿಯನ್ ಟಿಬಿ ರೋಗಿಗಳು ಈ ಪಟ್ಟಿಗೆ ಸೇರುತ್ತಿದ್ದಾರೆ. ಔಷಧಿ ಪ್ರತಿರೋಧ ಕ್ಷಯ ಪ್ರಕರಣಗಳ ವಿಷಯದಲ್ಲೂ ಭಾರತದ ಪಾಲು ಹೆಚ್ಚಾಗಿದೆ (ಶೇ.24). ಕ್ಷಯರೋಗವನ್ನು ಗುಣಪಡಿಸಲು ಬಳಸುವ ಪ್ರಥಮ ಹಂತದ ಒಂದು ಅಥವಾ ಹೆಚ್ಚಿನ ಔಷಧಿಗಳ ವಿರುದ್ಧ ಪ್ರತಿರೋಧ ಹೊಂದಿರುವ ರೋಗಿಗಳನ್ನು ಔಷಧಿ ಪ್ರತಿರೋಧ ರೋಗಿಗಳು ಎಂದು ಕರೆಯಲಾಗುತ್ತದೆ. 2017ರಲ್ಲಿ ಭಾರತದಲ್ಲಿ 1,35,000 ಡಿಆರ್‌ಟಿಬಿ ರೋಗಿಗಳಿದ್ದರು ಈ ಪೈಕಿ 1,24,200 (ಶೇ.92) ಬಹುಔಷಧಿ ಪ್ರತಿರೋಧ ಹೊಂದಿದ್ದರು. ಇವರಲ್ಲಿ 31,547 (ಶೇ.25.4) ರೋಗಿಗಳು ವ್ಯಾಪಕ ಔಷಧಿ ಪ್ರತಿರೋಧಕತೆ ಹೊಂದಿದ್ದರೆ, (ಎಕ್ಸ್ ಡಿಆರ್) 1,615 (ಶೇ.1.3) ರೋಗಿಗಳು ವ್ಯಾಪಕ ಔಷಧಿ ಪ್ರತಿರೋಧ ಕ್ಷಯ (ಎಕ್ಸ್‌ಡಿಆರ್ ಟಿಬಿ) ರೋಗಿಗಳಾಗಿ ದ್ದರು. 2017ರಲ್ಲಿ ಭಾರತದಲ್ಲಿ ಕೇವಲ 39,009 (ಶೇ.28)ಡಿಆರ್‌ಟಿಬಿ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಮತ್ತು 35,950 (ಶೇ.26) ಪ್ರಕರಣಗಳಲ್ಲಿ ಚಿಕಿತ್ಸೆ ಒದಗಿಸಲಾಗಿದೆ. ಇದರಿಂದ ರೋಗ ಪತ್ತೆ ಮತ್ತು ಚಿಕಿತ್ಸೆಯ ಮಧ್ಯೆ ದೊಡ್ಡ ಅಂತರ ಏರ್ಪಟ್ಟಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಮುಂಬೈಯಂಥ ದೊಡ್ಡ ಮೆಟ್ರೊಪಾಲಿಟನ್ ನಗರಗಳಲ್ಲಿ ಡಿಆರ್‌ಟಿಬಿಯ ಸಿಂಹಪಾಲಿದೆ ಎಂದು ಕೇಂದ್ರ ಕ್ಷಯರೋಗ ವಿಭಾಗದ ಇಂಡಿಯಾ ಟಿಬಿ ವರದಿ 2018ರ ವರದಿಯಲ್ಲಿ ತಿಳಿಸಲಾಗಿದೆ. ಇದಕ್ಕೆ ಕಾರಣವೆಂದರೆ, ಮುಂಬೈಯ 12.4 ಮಿಲಿಯನ್ ಜನರಲ್ಲಿ ಶೇ.42 ಭಾಗ ಜನರು ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ಕೊಳೆಗೇರಿಯಲ್ಲಿ ಜೀವಿಸುತ್ತಾರೆ. ಇವರಿಗೆ ಉತ್ತಮ ಆರೋಗ್ಯಸೇವೆ ಸೌಲಭ್ಯ ದೂರದ ಮಾತಾಗಿದೆ ಎಂದು ವರದಿ ತಿಳಿಸುತ್ತದೆ. ಈ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯಸೇವೆ ಪೂರೈಕೆದಾರರು ಮತ್ತು ರೋಗಪತ್ತೆ ಸೌಲಭ್ಯಗಳು ಲಭ್ಯವಿದ್ದು ಇವರ ಮಧ್ಯೆ ಚಿಕಿತ್ಸೆ ಮತ್ತು ದರಗಳಲ್ಲಿ ವ್ಯತ್ಯಾಸವಿದೆ. ಭಾರತವು ಹೆಚ್ಚುತ್ತಿರುವ ಡಿಆರ್‌ಟಿಬಿ ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಖಾಸಗಿ ಚಿಕಿತ್ಸಾ ಪೂರೈಕೆದಾರರನ್ನು ನಿಯಂತ್ರಿಸುವ ಸವಾಲನ್ನೂ ಎದುರಿಸುತ್ತಿದೆ ಎಂದು ಅಧ್ಯಯನ ವರದಿ ತಿಳಿಸುತ್ತದೆ.

ರೋಗಲಕ್ಷಣ ತಿಳಿಯಲು ವಿಫಲ:

ಅಧ್ಯಯನಕಾರರು ಸಂದರ್ಶಿಸಿದ ರೋಗಿಗಳು ತಮ್ಮ ನೆರೆಹೊರೆಯಲ್ಲಿ, ಕೆಲಸದ ಜಾಗದಲ್ಲಿ ಮತ್ತು ಕುಟುಂಬದಲ್ಲಿ ಇರುವ ಟಿಬಿ ಬಾಧಿತ ವ್ಯಕ್ತಿಗಳ ಬಗ್ಗೆ ತಿಳಿದಿದ್ದರು. ಆದರೆ ರೋಗ ಲಕ್ಷಣ ಮತ್ತು ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಕೂಡಾ ರೋಗಿಗಳನ್ನು ನಿರಾಕರಣೆ, ಭಯ ಮತ್ತು ದೌರ್ಬಲ್ಯದ ಭಾವನೆಯೊಳಗೆ ತಳ್ಳುತ್ತದೆ ಎಂದು ಅಧ್ಯಯನದಲ್ಲಿ ಅಭಿಪ್ರಾಯಿಸಲಾಗಿದೆ. ಕೆಮ್ಮು, ಜ್ವರ, ಸುಸ್ತು ಮತ್ತು ಹಸಿವಿನ ಕೊರತೆಯಂಥ ಸಾಮಾನ್ಯ ಲಕ್ಷಣಗಳು ಕ್ಷಯ ರೋಗದ ಲಕ್ಷಣಗಳಾಗಿರಬಹುದು ಎಂದು ಇವರು ಯೋಚಿಸಲೇ ಇಲ್ಲ. ಕ್ಷಯ ರೋಗಕ್ಕೆ ಈ ಹಿಂದೆ ಚಿಕಿತ್ಸೆ ಪಡೆದ ರೋಗಿಗಳೂ ಈ ಲಕ್ಷಣಗಳು ಟಿಬಿಯಾಗಿರಬಹುದು ಎನ್ನುವ ಎಚ್ಚರಿಕೆಯನ್ನು ಈ ವ್ಯಕ್ತಿಗಳಿಗೆ ನೀಡಲೇ ಇಲ್ಲ. ಒಬ್ಬ ರೋಗಿ ಮಳೆಯಿಂದಾಗಿ ಕೆಮ್ಮು, ಉಸಿರಾಟದ ತೊಂದರೆ ಮತ್ತು ಹಸಿವಿನ ಕೊರತೆ ಉಂಟಾಗಿದೆ ಎಂದು ಭಾವಿಸಿದ್ದರೆ ಇನ್ನೊಬ್ಬ ರೋಗಿ ಕೆಮ್ಮು ಮತ್ತು ಜ್ವರ ಸಾಮಾನ್ಯ ಶೀತದ ಪರಿಣಾಮವಾಗಿದೆ ಎಂದು ಯೋಚಿಸಿದ್ದರು. ವೈದ್ಯರ ಬಳಿ ತೆರಳಿ ತಪಾಸಣೆ ನಡೆಸಿದ ನಂತರವೇ ಇವರಿಗೆ ಟಿಬಿ ಇರುವುದು ಗೊತ್ತಾಗಿದೆ. ಹಿಂದೆ ಕ್ಷಯ ರೋಗವಿದ್ದು ಗುಣಮುಖ ಹೊಂದಿದ ರೋಗಿಗಳು ಪುನಃ ವ್ಯಾಪಕ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ ಎಂಬ ಭಯದಿಂದ ಮತ್ತೆ ರೋಗ ಬಾಧಿಸಿರುವ ಬಗ್ಗೆ ಒಪ್ಪಿಕೊಳ್ಳಲೂ ಭಯಪಡುತ್ತಿರುವುದು ಅಧ್ಯಯನದ ಸಮಯದಲ್ಲಿ ತಿಳಿದುಬಂದಿದೆ. ಹೆಚ್ಚಾಗಿ ಕ್ಷಯ ರೋಗಿಗಳು ತಮ್ಮ ಸಮೀಪವಿರುವ ಆರೋಗ್ಯ ಸೇವೆ ಪೂರೈಕೆದಾರರ ಬಳಿಯೇ ಚಿಕಿತ್ಸೆಗೆ ತೆರಳುತ್ತಾರೆ. ಈ ಆರೋಗ್ಯಸೇವೆ ಪೂರೈಕೆದಾರರು ನೋಂದಾವಣೆಗೊಳ್ಳದ ವೈದ್ಯರೋ, ಖಾಸಗಿ ಅಲೋಪಥಿ ವೈದ್ಯರೋ ಅಥವಾ ಪರ್ಯಾಯ ಚಿಕಿತ್ಸಾ ವಿಧಾನಗಳಾದ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಅಥವಾ ಹೋಮಿಯೋಪಥಿ (ಆಯುಷ್) ಯನ್ನು ಅನುಸರಿಸುವವರಾಗಿರುತ್ತಾರೆ. ಇಂಡಿಯಾಸ್ಪೆಂಡ್ ಸಂದರ್ಶಿಸಿದ ಶೇ. 55 ರೋಗಿಗಳು ವಿಳಂಬಿತ ರೋಗಪತ್ತೆಯ ಸಮಸ್ಯೆಯನ್ನು ಎದುರಿಸಿದ್ದಾರೆ. ಆರೋಗ್ಯಸೇವೆ ಪೂರೈಕೆದಾರರು ಪ್ರತಿ ರೋಗಿಗಳಿಗೆ ಸರಾಸರಿ ಆರು ನಿಮಿಷಗಳನ್ನು ನೀಡಿದ್ದಾರೆ ಮತ್ತು ರೋಗಿಯ ರೋಗಲಕ್ಷಣಗಳನ್ನು ತಿಳಿದುಕೊಳ್ಳುವಲ್ಲಿ ವಿಳಂಬ ಮಾಡಿದ್ದಾರೆ. ಇವರು ರೋಗಿಗಳಿಗೆ ಹೆಚ್ಚು ಸಮಯವನ್ನು ನೀಡಿ ರೋಗಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಮತ್ತು ಟಿಬಿ ವ್ಯಾಪಕವಾಗಿರುವ ಪ್ರದೇಶಗಳಿಂದ ಬಂದಿರುವ ರೋಗಿಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿದ್ದರೆ ಈ ವಿಳಂಬವನ್ನು ತಡೆಯಬಹುದಿತ್ತು. ರೋಗ ಪತ್ತೆಯಾಗುವುದಕ್ಕೂ ಮೊದಲು ಕೆಲವು ರೋಗಿಗಳು ಅನೇಕ ಖಾಸಗಿ ವೈದ್ಯರು, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳನ್ನು ಸುತ್ತಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಮೊದಲೇ ಚಿಕಿತ್ಸೆ ನೀಡಲಾಗಿದ್ದ ಓರ್ವ ಮಹಿಳೆಯಲ್ಲಿ ಮತ್ತೆ ಕ್ಷಯರೋಗ ಕಾಣಿಸಿಕೊಂಡಿರಬಹುದು ಎನ್ನುವುದನ್ನು ಪತ್ತೆ ಮಾಡುವಲ್ಲೂ ಒಬ್ಬ ವೈದ್ಯರು ವಿಫಲವಾಗಿದ್ದಾರೆ. ಬಹುತೇಕ ಒಂದು ವರ್ಷಗಳ ಕಾಲ ಹಲವು ಖಾಸಗಿ ವೈದ್ಯರನ್ನು/ಆಸ್ಪತ್ರೆಗಳನ್ನು ತಿರುಗಾಡಿದ ನಂತರ ಆಕೆಗೆ ಎಕ್ಸ್‌ಡಿಆರ್ ಟಿಬಿ ಇರುವುದು ಪತ್ತೆಯಾಗಿದೆ. ಸಂದರ್ಶಿಸಿದ ರೋಗಿಗಳಲ್ಲಿ ರೋಗ ಪತ್ತೆಯಾಗಿ ಡಿಆರ್‌ಟಿಬಿಗೆ ಚಿಕಿತ್ಸೆ ಆರಂಭಿಸಲು ತೆಗೆದುಕೊಂಡ ಸರಾಸರಿ ಅವಧಿ 87 ದಿನಗಳು. ಅತಿ ಕಡಿಮೆ ಅವಧಿಯೆಂದರೆ ಒಂದು ತಿಂಗಳು ಮತ್ತು ಅತೀಹೆಚ್ಚಿನ ಅವಧಿಯೆಂದರೆ ಎಂಟು ತಿಂಗಳು ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಕೃಪೆ: ಇಂಡಿಯಾಸ್ಪೆಂಡ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News