ಲಂಕಾ ವಿರುದ್ಧ ಆಫ್ರಿಕಕ್ಕೆ ಸರಣಿ ವಿಜಯ

Update: 2019-03-23 19:07 GMT

ಸೆಂಚೂರಿಯನ್, ಮಾ.23: ಇಸುರು ಉದನಾ ಅವರ ಅದ್ಭುತ ಅರ್ಧಶತಕದ ಮಧ್ಯೆಯೂ ಶುಕ್ರವಾರ ಶ್ರೀಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ 16 ರನ್‌ಗಳಿಂದ ಜಯ ಗಳಿಸಿದ ದ.ಆಫ್ರಿಕ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಇಲ್ಲಿನ ಸೂಪರ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಒಂದು ಹಂತದಲ್ಲಿ ಹೀನಾಯ ಸೋಲಿನ ಭೀತಿಗೆ ಸಿಲುಕಿದ್ದ ಶ್ರೀಲಂಕಾಗೆ ಉದಾನಾ ಅವರ ಭರ್ಜರಿ ಬ್ಯಾಟಿಂಗ್ (84, 48 ಎಸೆತ, 8 ಬೌಂಡರಿ, 6 ಸಿಕ್ಸರ್) ಜಯದ ಎಳೆ ಕಾಣಿಸುವಂತೆ ಮಾಡಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹರಿಣ ಪಡೆಗೆ ರೀಝಾ ಹೆಂಡ್ರಿಕ್ಸ್ (65, 9 ಬೌಂಡರಿ ) ಹಾಗೂ ರಸ್ಸಿ ವ್ಯಾನ್ ಡಸ್ಸೆನ್ (64, 4 ಬೌಂಡರಿ, 3 ಸಿಕ್ಸರ್) ಸೊಗಸಾದ ಬಲ ಒದಗಿಸಿದರು. ಇವರಿಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 78 ಎಸೆತಗಳಲ್ಲಿ 116 ರನ್ ಜಮೆ ಮಾಡಿದರು. ಅಂತಿಮವಾಗಿ ದ.ಆಫ್ರಿಕ 3 ವಿಕೆಟ್ ಕಳೆದುಕೊಂಡು 180 ರನ್‌ಗಳ ಉತ್ತಮ ಮೊತ್ತ ಜಮೆ ಮಾಡಿತು. ಗುರಿ ಬೆನ್ನಟ್ಟಿದ್ದ ಲಂಕಾಗೆ ಆರಂಭದಲ್ಲೇ ಆಘಾತ ಎದುರಾಯಿತು. ನಾಲ್ಕು ಓವರ್ ಆಗುವಷ್ಟರಲ್ಲಿ ಆ ತಂಡದ ನಾಲ್ಕು ವಿಕೆಟ್‌ಗಳು ಉದುರಿದ್ದವು. 62 ರನ್‌ಗೆ 6 ವಿಕೆಟ್ ಕಳೆದುಕೊಂಡು ತಂಡ ತೀವ್ರ ಸಂಕಷ್ಟದಲ್ಲಿರುವಾಗ ಉದನಾ 10ನೇ ಓವರ್‌ನಲ್ಲಿ ಮೈದಾನ ಪ್ರವೇಶಿಸಿದರು.

ತನ್ನ ವೃತ್ತಿಜೀವನದ ಕೇವಲ ನಾಲ್ಕನೇ ಏಕದಿನ ಪಂದ್ಯವಾಡಿದ ಉದನಾ, ಪರಿಣತ ದಾಂಡಿಗನಂತೆ ಬ್ಯಾಟ್ ಬೀಸಿದರು. ಆದರೆ ಅವರ ಇನಿಂಗ್ಸ್ ತನ್ನ ತಂಡವನ್ನು ಗೆಲ್ಲಿಸಲು ಸಾಕಾಗಲಿಲ್ಲ. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಶಕ್ತವಾಯಿತು. ದ.ಆಫ್ರಿಕ ಪರ ಕ್ರಿಸ್ ಮೊರಿಸ್(32ಕ್ಕೆ 3) ಉತ್ತಮ ಬೌಲರ್ ಎನಿಸಿಕೊಂಡರು.

ರಸ್ಸಿ ವ್ಯಾನ್ ಡರ್ ಡಸ್ಸೆನ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News