ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು, ಸಶಸ್ತ್ರಪಡೆಗೆ ಹಣ ದೇಣಿಗೆ

Update: 2019-03-23 19:08 GMT

  ಹೊಸದಿಲ್ಲಿ, ಮಾ.23: ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಆಡಳಿತ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಶನಿವಾರ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಪಡಿಸಲು ನಿರ್ಧರಿಸಿದ್ದು, ಸಮಾರಂಭಕ್ಕೆ ವೆಚ್ಚವಾಗುವ ಹಣವನ್ನು ದೇಶದ ಸಶಸ್ತ್ರ ಪಡೆಗೆ ದೇಣಿಗೆ ನೀಡಲು ನಿರ್ಧರಿಸಿದೆ. ''ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಅಂದಾಜು ವೆಚ್ಚ 20 ಕೋಟಿ ರೂ.ಎಂದು ನಿರ್ಧರಿಸಲಾಗಿತ್ತು. ಭಾರತೀಯ ಸೇನೆಗೆ 11 ಕೋ.ರೂ., ಸಿಆರ್‌ಪಿಎಫ್‌ಗೆ 7 ಕೋ.ರೂ. ಹಾಗೂ ಕ್ರಮವಾಗಿ ನೌಕಾ ಹಾಗೂ ವಾಯು ಪಡೆಗೆ ತಲಾ 1 ಕೋ.ರೂ. ದೇಣಿಗೆ ನೀಡಲು ಒಮ್ಮತದಿಂದ ನಿರ್ಧರಿಸಲಾಗಿದೆ'' ಎಂದು ಐಪಿಎಲ್ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

''ಒಂದು ಒಕ್ಕೂಟವಾಗಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ನಡೆಸದೇ ಇರುವುದು ಉತ್ತಮ ಎಂದು ನಿರ್ಧರಿಸಿದ್ದೇವೆ. ಅದರ ಬದಲಿಗೆ ಆ ಹಣವನ್ನು ಅತ್ಯಂತ ಮುಖ್ಯವಾದ ಕಾರಣಕ್ಕೆ ಹಾಗೂ ಪ್ರತಿಯೊಬ್ಬರ ಹೃದಯಕ್ಕೆ ಹತ್ತಿರವಾಗಿರುವುದಕ್ಕೆ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದೇವೆ'' ಎಂದು ಸಿಒಎ ಅಧ್ಯಕ್ಷ ವಿನೋದ್ ರಾಯ್ ಹೇಳಿದ್ದಾರೆ. ''ಇದೊಂದು ಸ್ವಾಗತಾರ್ಹ ನಿಲುವು. ಉಗ್ರರ ದಾಳಿಯಲ್ಲಿ ಜೀವ ಕಳೆದುಕೊಂಡವರಿಗೆ ಗೌರವದ ಸಂಕೇತ ಇದಾಗಿದೆ. ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಬಿಸಿಸಿಐ ಯಾವಾಗಲೂ ಸೂಕ್ಷ್ಮವಾಗಿರುತ್ತದೆ. ಅಗತ್ಯಬಿದ್ದಾಗ ಕೊಡುಗೆ ನೀಡುವುದನ್ನು ಮುಂದುವರಿಸಲಿದೆ'' ಎಂದು ಸಿಒಎ ಸದಸ್ಯೆ ಡಯಾನಾ ಎಡುಲ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News