ನೆನಪೇ ಸಂಗೀತ ಪ್ರಾಂಜಲ ಮನಸ್ಸಿನ ತಪ್ಪೊಪ್ಪಿಗೆ

Update: 2019-03-23 19:10 GMT

ಕನ್ನಡದ ಮಹತ್ವದ ಕತೆಗಾರ ವಿಕ್ರಂ ಹತ್ವಾರ ಇವರು ತಮ್ಮ ಪ್ರಕೃತಿ ಪ್ರಕಾಶನದ ಮೂಲಕ ಇತ್ತೀಚೆಗೆ ಹೊರತಂದ ವಿದ್ಯಾಭೂಷಣದ ಅತ್ಮ ಕಥನ ನೆನಪೇ ಸಂಗೀತ ಎನ್ನುವ ಕೃತಿ ವಿಶಿಷ್ಟ ರೀತಿಯಲ್ಲಿ ಓದುಗರ ಗಮನ ಸೆಳೆಯುತ್ತದೆ. ಒಂದಷ್ಟು ಕಾಲ ಕರಾವಳಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾಗಿದ್ದು ನಂತರ ಪೀಠ ತೊರೆದು ಗೃಹಸ್ಥಾಶ್ರಮ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಭಕ್ತಿ ಸಂಗೀತ ಪರಂಪರೆಗೆ ತನ್ನನ್ನು ಸಮರ್ಪಿಸಿಕೊಂಡ ವಿದ್ಯಾಭೂಷಣರ ಈ ಅತ್ಮಕಥನದಲ್ಲಿ ಓದುಗರಿಗೆ ಇಷ್ಟವಾಗುವ ಅಂಶವೆಂದರೆ ಕೃತಿಕಾರರ ಪ್ರಾಮಾಣಿಕತೆ. ಕೃತಿಯ ಆವರಣದ ಒಳಪುಟಗಳಲ್ಲಿ ದಾಖಲಾಗಿರುವ ಲೇಖಕ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹಾಗೂ ಕತೆಗಾರ ಅಬ್ದುಲ್ ರಶೀದ್ ಇವರುಗಳ ವಿಮರ್ಶಾತ್ಮಕ ಮಾತುಗಳು ಕೃತಿಯ ಮಹತ್ವವನ್ನು ಹೆಚ್ಚಿಸಿವೆ. ವಿದ್ಯಾಭೂಷಣರು ಬಿಚ್ಚಿಟ್ಟ ನೆನಪುಗಳ ಹೊಳಪು ಮತ್ತು ಪರಿಮಳ ಅನನ್ಯ ಎಂದು ಅಬ್ದುಲ್ ರಶೀದ್ ಹೇಳಿದರೆ, ವಿದ್ಯಾಭೂಷಣರನ್ನು ಓರ್ವ ಹಾಡುಗಾರನಾಗಿ ನೋಡುವುದೇ ನನಗಿಷ್ಟ ಎಂದು ಹೇಳಿರುವ ತೋಳ್ಪಾಡಿಯವರ ಆಶ್ರಯ ನುಡಿಗಳೂ ಕೃತಿಗೆ ಮೆರುಗು ನೀಡಿದೆ ಎನ್ನಲು ಅಡ್ಡಿಯಿಲ್ಲ.

ಹೆಚ್ಚಿನ ಮಠಮಾನ್ಯಗಳಲ್ಲಿ ಇರುವ ಸಂಪತ್ತು, ಅಧಿಕಾರ ಮತ್ತು ಜನಮನ್ನಣೆ ತಮ್ಮ ಕುಟುಂಬದ ವ್ಯಾಪ್ತಿಯಲ್ಲೇ ಇರಬೇಕೆಂಬ ಕೆಲವು ಪೀಠಾಧಿಪತಿಗಳ ಆಕಾಂಕ್ಷೆಗಳು ಕೆಲವೊಮ್ಮೆ ವಿರೋಧಾಭಾಸಗಳಿಗೂ ಎಡೆ ಮಾಡಿಕೊಡುತ್ತವೆ ಎಂಬುದು ಯಾರಿಗೂ ತಿಳಿಯದ ವಿಷಯವೇನಲ್ಲ. ಹಿಂದೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವಜ್ಞ ತೀರ್ಥರ ಉತ್ತರಾಧಿಕಾರಿಯಾಗಿ ಪೀಠವೇರಿದ ಶ್ರೀ ವಿದ್ಯಾಸಿಂಧು ತೀರ್ಥರು ಶ್ರೀ ವಿಶ್ವಜ್ಞ ತೀರ್ಥರ ಪೂರ್ವಾಶ್ರಮದ ಕಿರಿಯ ಸಹೋದರರು. ಈ ಪರಂಪರೆಯನ್ನು ಮುಂದುವರಿಸಲು ಹಿರಿಯ ಪೀಠಾಧೀಶರು ಆಯ್ಕೆ ಮಾಡಿದ್ದು ತಮ್ಮದೇ ಕುಟುಂಬದ ಓರ್ವ ಯೋಗೀಂದ್ರ ಎಂಬ ಬಾಲಕನನ್ನು. ಶಾಲಾದಿನಗಳಲ್ಲಿ ಹಬ್ಬ ಹರಿದಿನಗಳ ನೆಪದಲ್ಲಿ ಆಚರಿಸುವ ಗಣೇಶ ಚತುರ್ಥಿ, ನವರಾತ್ರಿ ಇತ್ಯಾದಿಗಳ ಪ್ರಯುಕ್ತ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ ಹೈಸ್ಕೂಲ್ ಮುಗಿದೊಡನೆ ಕಾಲೇಜು ಸೇರಬೇಕೆಂದಿರುವ ಹುಡುಗನಿಗೆ ಕುಟುಂಬದ ಹಿರಿಯರೆಲ್ಲ ಸೇರಿ ಒತ್ತಾಯಪೂರ್ವಕ ಪೀಠಾಧಿಪತಿಯನ್ನಾಗಿ ನೇಮಕ ಮಾಡಲು ಆಯ್ಕೆ ಮಾಡುತ್ತಾರೆ.

ಮುಂದೆ ಒಂದು ಪ್ರಶಸ್ತ ದಿನದಂದು ವಿಧಿವತ್ತಾಗಿ ಪೀಠ ಸ್ವೀಕಾರದ ಕಾರ್ಯಕ್ರಮಗಳು ನಡೆಯುತ್ತವೆ., ಆತ್ಮಶ್ರಾದ್ಧ ವಿರಜಾ ಹೋಮ, ಕೇಶಮುಂಡನ, ಕಾವಿ ವಸ್ತ್ರಧಾರಣೆ, ಪ್ರಣವ ಮಂತ್ರೋಪದೇಶದೊಡನೆ ಶ್ರೀ ವಿದ್ಯಾಭೂಷಣ ತೀರ್ಥರೆಂದು ನೂತನ ನಾಮಕರಣ ನಂತರ ಆನೆಯ ಮೇಲೆ ಕುಳಿತು ಮೆರವಣಿಗೆ ಪುರಪ್ರವೇಶ ಶಿಷ್ಯವರ್ಗದವರಿಂದ ಪಟ್ಟ ಕಾಣಿಕೆ ಭೂರಿಭೋಜನ ಸಂತರ್ಪಣೆ. ಮುಂದಿನದೆಲ್ಲ ಆಶ್ರಯೋಚಿತವಾದ ಕಠಿಣ ಶಿಸ್ತಿನ ಜೀವನ. ಮಠದ ದೇವರಿಗೆ ಸಂಬಂಧಪಟ್ಟ ಪೂಜಾ ವಿಧಿಗಳನ್ನು ಉಡುಪಿಯ ವಿದ್ವಾಂಸರಾದ ಲಕ್ಷ್ಮೀನಾರಾಯಣ ಉಪಾಧ್ಯಾಯ ಹಾಗೂ ಲಕ್ಷ್ಮೀನಾರಾಯಣ ಕೊಡಂಚರಿಂದ ಕಲಿತದ್ದಾಯಿತು. ಕೊಡಂಚರು ಸುಮಾರು ಎರಡು ವರ್ಷಗಳಷ್ಟು ಕಾಲ ಮಠದಲ್ಲಿದ್ದು, ಮಧ್ವವಿಜಯ ಮಹಾಕಾವ್ಯ ಮತ್ತು ಮಹಾಭಾರತ ತಾತ್ಪರ್ಯ ನಿರ್ಣಯದ ಪಾಠವನ್ನು ಹೇಳಿಕೊಟ್ಟರು. ಮುಂದೆ ಪೇಜಾವರ ಶ್ರೀಗಳಿಂದ ತರ್ಕಶಾಸ್ತ್ರ, ವೇದಾಂತ ಶಿಕ್ಷಣದ ಪಾಠವೂ ಆಗುತ್ತದೆ. ಇವರು ಸನ್ಯಾಸ ಸ್ವೀಕರಿಸಿದ ಮುಂದಿನ ವರ್ಷ ಅಂದರೆ 1968 ರ ಜನವರಿಯಲ್ಲಿ ಪೇಜಾವರ ಶ್ರೀಗಳು ಎರಡನೆಯ ಬಾರಿ ಪರ್ಯಾಯ ಪೀಠವನ್ನು ವಹಿಸಿಕೊಂಡಾಗ ಅವರ ಆದೇಶಗಳಂತೆ ಕೆಲ ಸಮಯ ಉಡುಪಿಯ ಮಠದಲ್ಲಿ ವಾಸ್ತವ್ಯ ಮಾಡುವ ಅವಕಾಶ ಸಿಗುತ್ತದೆ. ಆಗ ದಿನನಿತ್ಯ ಸಾಯಂಕಾಲ ರಾಜಾಂಗಣದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಇವರಿಗೆ ಒಂದು ಒಳನೋಟ ಕೊಡುತ್ತವೆ. ಉಡುಪಿಯಿಂದ ಮತ್ತೆ ಕುಕ್ಕೆಗೆ ಹಿಂದಿರುಗಿದ ನಂತರ ಶ್ರೀಮದಾನಂದ ತೀರ್ಥ ತತ್ವದರ್ಶನಿ ಎಂಬ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟುಹಾಕಿ ಅದರ ಮೂಲಕ ಗಾಯನ ಪ್ರವಚನ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇವರ ಇಂಥ ಕೆಲಸಗಳಲ್ಲೆಲ್ಲ ಇವರಿಗೆ ಜತೆಯಾಗಿರುತ್ತಿದ್ದುದು ಲೇಖಕ ಲಕ್ಷ್ಮೀ ತೋಳ್ಪಾಡಿ ಅವರು ಇವೆಲ್ಲದರ ಜತೆ ಆಶ್ರಮೋಜಿತ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸದಾ ಒಂದಲ್ಲಾ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ತನಗೆ ಏನೂ ಇಲ್ಲ ಎಂಬ ಭಾವನೆಯಿಂದ ಮನದ ಅಳಲನ್ನು ಯಾರಾದರೂ ಆತ್ಮೀಯರಲ್ಲಿ ತೋಡಿಕೊಳ್ಳಬೇಕೆಂಬ ಯೋಜನೆ ತನ್ನನ್ನೂ ಆಗಾಗ ಕಾಡುತ್ತಿತ್ತು ಎಂದು ಅವರು ಹೇಳಿಕೊಂಡಿರುವುದನ್ನು ಓದಿದಾಗ ಅವರ ಮನಸ್ಸಿನ ತಳಮಳವನ್ನು ಓದುಗರು ಅರ್ಥಮಾಡಿಕೊಳ್ಳಬಹುದು.

ಇದ್ದಕ್ಕಿದ್ದಂತೆ ಒಂದು ದಿನ ಫಲಿಮಾರು ಮಠದ ಶ್ರೀರಘುವಲ್ಲಭತೀರ್ಥರು ಪೀಠತ್ಯಾಗ ಮಾಡಿದ ಸುದ್ದಿ ಪತ್ರಿಕೆಯಲ್ಲಿ ಓದಿದಾಗ ಹೀಗೂ ಮಾಡಲು ಸಾಧ್ಯ ಎಂದು ತನ್ನ ಕುರಿತಾಗಿಯೇ ಒಂದು ಸಣ್ಣ ಆಸೆ ಇವರ ಮನಸ್ಸಲ್ಲಿ ಮೂಡಿದ್ದನ್ನು ಇವರು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಾವೇ ಸ್ಥಾಪಿಸಿದ ‘ಜಿಜ್ಞಾಸು ಸಂಘ’ ಮತ್ತು ಪೂರ್ವಾಶ್ರಮದ ತಂದೆಯಾಗಿದ್ದ ದಿ.ಗೋವಿಂದಾಚಾರ್ಯರ ನೆನಪಿನಲ್ಲಿ ಸ್ಥಾಪಿಸಿದ ಗೋವಿಂದಗಾನ ಸಭಾ ವೇದಿಕೆಯಡಿ ಅನೇಕ ವಿಷಯ ಹೆಸರಾಂತ ವಿಷಯ ತಜ್ಞ ಹಾಗೂ ಸಂಗೀತ ಕಲಾವಿದರಿಗೆ ವೇದಿಕೆ ಒದಗಿಸಿ ಕೊಡುವುದರ ಮೂಲಕ ಕುಕ್ಕೆಯಲ್ಲಿ ಒಂದು ಸಾಂಸ್ಕತಿಕ ವಾತಾವರಣವನ್ನು ಸೃಷ್ಟಿಸುವಲ್ಲಿ ಶ್ರಮವಹಿಸಿದರು. ಜತೆಗೆ ದೇಶದ ತುರ್ತುಪರಿಸ್ಥಿತಿ ಸಂದರ್ಭ ಪಶ್ಚಿಮಘಟ್ಟ ಉಳಿಸಿ ಇತ್ಯಾದಿ ಹೋರಾಟಗಳಲ್ಲಿ ಕೂಡಾ ತಮ್ಮ ಸಹಕಾರ ನೀಡಿದರು. ಮಠದಲ್ಲಿನ ಮಧ್ವ ಮಂಟಪದ ನಿರ್ಮಾಣ ಕಾರ್ಯ, ಹತ್ತಿರದ ಬಿಳಿನೆಲೆಯಲ್ಲಿ ಪ್ರೌಢ ಶಾಲೆಯ ಸ್ಥಾಪನೆ, ಕುಕ್ಕೆಯ ಅನತಿ ದೂರದಲ್ಲಿರುವ ದುರ್ಗಾದೇವಿಯ ಜೀರ್ಣೊದ್ಧಾರ ಕಾರ್ಯ ಇತ್ಯಾದಿಗಳು ಇವರ ನಿಸ್ವಾರ್ಥ ಪ್ರಯತ್ನದ ಫಲ. ಪೀಠಕ್ಕೆ ಸಂಬಂಧಿಸಿದ ಎಲ್ಲರ ಒಳಗೊಳ್ಳುವಿಕೆಯಿಂದ ಈ ಎಲ್ಲ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಧನ್ಯತೆ ಇವರದ್ದು. ತಾನು ನೀಡಿದ ಸಂಗೀತ ಕಾರ್ಯಕ್ರಮಗಳ ಗೌರವ ಸಂಭಾವನೆಯನ್ನು ಈ ಎಲ್ಲ ಕೆಲಸಗಳಿಗೆ ಇವರು ವಿನಿಯೋಗಿಸಿದ್ದಾರೆ.

ಮುಂದೆ ಜೀವನದಲ್ಲಿ ಸಂಘರ್ಷವನ್ನು ಎದುರಿಸುವ ಸನ್ನಿವೇಶವೂ ಇವರಿಗೆ ಬರುತ್ತದೆ.ಪೀಠವನ್ನು ತ್ಯಜಿಸಿ ಗ್ರಹಸ್ಥ ಜೀವನಕ್ಕೆ ಕಾಲಿರಿಸಲು ಇವರು ನಿರ್ಧರಿಸಿದಾಗ ಸಂಬಂಧಪಟ್ಟ ಎಲ್ಲರಿಗೂ ತೀವ್ರ ಆಘಾತವಾಗುತ್ತದೆ. ಪೀಠ ತ್ಯಜಿಸದಿರಲು ಇವರ ಮನವೊಲಿಸುವ ಪ್ರಯತ್ನಗಳು ಪೇಜಾವರ ಶ್ರೀಗಳ ಸಹಿತ ಎಲ್ಲರಿಂದಲೂ ಆಗುತ್ತದೆ. ಆನಂತರ ಎಲ್ಲ ಪರ ವಿರೋಧಗಳ ನಡುವೆಯೂ ಕೆಲವು ಆತ್ಮೀಯರ ಸಹಭಾಗಿತ್ವದೊಡನೆ ಇವರ ವಿವಾಹವೂ ನಡೆದು ಹೋಗುತ್ತದೆ. ಇವರು ಇಷ್ಟಪಟ್ಟ ಬಳ್ಳಾರಿಯ ಖಾತ್ಯ ವೈದ್ಯ ಡಾ.ಶ್ರೀನಿವಾಸಮೂರ್ತಿಯವರ ಮಗಳಾಗಿರುವ ರಮಾ ಇವರನ್ನು 1997ರ ಎಪ್ರಿಲ್ ಮೊದಲ ವಾರದಲ್ಲಿ ಮದುವೆಯಾಗಿ ಗ್ರಹಸ್ಥ ಧರ್ಮ ಸ್ವೀಕರಿಸುತ್ತಾರೆ. ಈಗ ಇವರು ಇಬ್ಬರು ಮಕ್ಕಳ ತಂದೆ.ಹೆಂಡತಿ ರಮಾ ಇವರ ಸಹಭಾಗಿತ್ವದಲ್ಲಿ ಸ್ಥಾಪಿಸಿದ ಭಕ್ತಿ ಭಾರತಿ ಟ್ರಸ್ಟ್ ಮೂಲಕ ಹರಿದಾಸ ಸಾಹಿತ್ಯ ಮತ್ತು ಸಂಗೀತ ಹಾಗೂ ಸಾಮಾಜಿಕ ಸೇವೆಗಳನ್ನೂ ನಡೆಸುತ್ತಾರೆ. ಒಟ್ಟಾರೆಯಾಗಿ ಪ್ರಾಂಜಲ ಮನಸ್ಸಿನ ತಪ್ಪೊಪ್ಪಿಗೆಯಂತಿರುವ ಇವರ ಈ ಆತ್ಮಕಥನ ಓದುಗರ ಹೃದಯಗಳನ್ನು ತಟ್ಟುವಲ್ಲಿ ಯಶಸ್ವಿಯಾಗಿದೆಯೆನ್ನಬಹುದು. ಕೃತಿಕಾರರ ಸಾಂಸ್ಕತಿಕ ಮತ್ತು ಸಾಮಾಜಿಕ ಕಾಳಜಿಗಳನ್ನು ಕೂಡಾ ಗಮನಿಸಬೇಕು.

Writer - ಕೆ.ಶಾರದಾ ಭಟ್

contributor

Editor - ಕೆ.ಶಾರದಾ ಭಟ್

contributor

Similar News