ಬಾಲಗಂಗಾಧರ ತಿಲಕರ ದೃಷ್ಟಿಕೋನದಲ್ಲಿ ಮಹಿಳಾ ಸಬಲೀಕರಣ, ಹೆಣ್ಮಕ್ಕಳ ಶಿಕ್ಷಣ

Update: 2019-03-23 19:22 GMT

ಬಾಲಗಂಗಾಧರ ತಿಲಕ್ ಅವರು ಜನಸಮೂಹವನ್ನು ಒಗ್ಗೂಡಿಸಲು ಹಿಂದೂ ಹಬ್ಬಗಳನ್ನು ಬಳಸುವ ಮತ್ತು ಕೇಸರಿ ಹಾಗೂ ಮಹಾರಟ್ಟ ಇತ್ಯಾದಿ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವಂಥ ವೈವಿಧ್ಯಮಯ ವಿಧಾನಗಳಿಂದ ಸ್ವಾತಂತ್ರ ಸಂಗ್ರಾಮಕ್ಕೆ ಹೊಸ ಹುರುಪು ಮತ್ತು ಶಕ್ತಿಯನ್ನು ತುಂಬುವಲ್ಲಿ ಬಹುಮುಖ್ಯ ಪಾತ್ರವನ್ನು ನಿಭಾಯಿಸಿದ್ದರು. ಬಾಲ್ಯವಿವಾಹ, ಮಹಿಳಾ ಶಿಕ್ಷಣ ಮತ್ತು ವಿಧವೆ ಪುನರ್‌ವಿವಾಹ ಮತ್ತು ಆಕೆಯ ಸ್ಥಿತಿಯ ಬಗ್ಗೆ ತಿಲಕ್ ಇತರ ಪ್ರಗತಿಪರರೊಂದಿಗೆ ಚರ್ಚೆಗೆ ಇಳಿಯುತ್ತಿದ್ದರು. ಈ ವಿಷಯಗಳಲ್ಲಿ ಅವರ ಅನಿಸಿಕೆಗಳನ್ನು ಇಲ್ಲಿ ನೀಡಲಾಗಿದೆ.

ಬಾಲ್ಯವಿವಾಹದ ಕುರಿತು: ಚಿಕ್ಕ ವಯಸ್ಸಿನಲ್ಲಿ ಹೆಣ್ಮಕ್ಕಳು ತಾಯಿಯಾಗುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ ಮತ್ತು ಬಾಲ್ಯವಿವಾಹದ ಪರಿಣಾಮವಾಗಿಯೇ ಸಮಾಜದಲ್ಲಿ ಬಾಲ ವಿಧವೆಯರು ಇಷ್ಟೊಂದು ಸಂಖ್ಯೆಯಲ್ಲಿ ಇರುವಂತಾಗಿದೆ ಎಂಬ ವಾದವನ್ನು ಬಾಲಗಂಗಾಧರ ತಿಲಕರ ಪಿತೃಪ್ರಭುತ್ವದ ಮಾನಸಿಕತೆ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಬಾಲಗಂಗಾಧರ ತಿಲಕರು, ಹೆಣ್ಮಕ್ಕಳ ವಿವಾಹದ ವಯಸ್ಸನ್ನು ಏರಿಕೆ ಮಾಡುವುದು ಮಹಿಳೆಯರಿಗೆ ಸಂಬಂಧಿಸಿದ ವಿಷಯವಲ್ಲ, ಬದಲಿಗೆ ಬಾಲಕರು ಸಣ್ಣ ವಯಸ್ಸಿನಲ್ಲೇ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾದ ಅನಿವಾರ್ಯಕ್ಕೆ ಸಿಲುಕುತ್ತಾರೆ ಎಂಬುದೇ ದೊಡ್ಡ ಸಮಸ್ಯೆಯೆಂದು ವಾದಿಸಿದ್ದರು. ಇದು ಯುವಕರನ್ನು ದುರ್ಬಲರನ್ನಾಗಿಸಿದೆ ಮತ್ತು ಇದರ ಫಲವಾಗಿ ನಾಯಕತ್ವದ ಸ್ಫೂರ್ತಿ ಕಳೆದುಹೋಗಿದೆ. ಇದರಿಂದಾಗಿ ಸಮಾಜವು ಉತ್ತಮ ನಾಯಕರನ್ನು ಕಳೆದುಕೊಳ್ಳುತ್ತಿದೆ. ಯುವಕರು ತಮ್ಮ ಶಕ್ತಿ ಮತ್ತು ಸಮಯವನ್ನು ರಾಷ್ಟ್ರ ನಿರ್ಮಾಣದ ಕಾರ್ಯಕ್ಕಷ್ಟೇ ಸೀಮಿತಗೊಳಿಸಿದರೆ ಮಾತ್ರ ರಾಷ್ಟ್ರದ ಪುನರುತ್ಥಾನ ಸಾಧ್ಯ. ಹೆಣ್ಮಕ್ಕಳ ವಿವಾಹದ ವಯಸ್ಸನ್ನು 10ರಿಂದ 12ಕ್ಕೆ ಏರಿಸುವ ವಯಸ್ಸಿನ ಸಮ್ಮತಿ ಕಾಯ್ದೆಗೆ ತಿಲಕ್ ವಿರೋಧ ವ್ಯಕ್ತಪಡಿಸಿದ್ದರು. ಇಂಥ ಸುಧಾರಣ ಕ್ರಮಗಳು ಭಾರತದ ಮೇಲೆ ವಿದೇಶಿಗರ ಮೂಲಕ ಬಾಹ್ಯವಾಗಿ ಹೇರುವಂತಿರಬಾರದು ಬದಲಿಗೆ ನಮ್ಮದೇ ಸೈದ್ಧಾಂತಿಕ ನಿಲುವಿನ ಫಲವಾಗಿರಬೇಕು ಎಂಬ ಭಾವನೆಯೂ ಈ ವಿರೋಧಕ್ಕೆ ಕಾರಣವಾಗಿತ್ತು. ಮಹಿಳಾ ಶಿಕ್ಷಣದ ಕುರಿತು: ಹೆಣ್ಮಕ್ಕಳಿಗೆ ಆಂಗ್ಲ ಶಿಕ್ಷಣ ನೀಡುವುದನ್ನು ತಿಲಕ್ ವಿರೋಧಿಸಿದ್ದರು. ಇದರಿಂದ ಹೆಣ್ಮಕ್ಕಳು ಭಾರತೀಯ ಸಿದ್ಧಾಂತ ಮತ್ತು ವೌಲ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂಬುದು ಅವರ ವಾದವಾಗಿತ್ತು. ಹಿಂದೂ ಮಹಿಳೆಯರಿಗೆ ಓದಲು ಕಲಿಸಿದರೆ ಅವರು ತಮ್ಮ ಸಾಂಪ್ರದಾಯಿಕ ವೌಲ್ಯಗಳನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರು ಅನೈತಿಕ ಮತ್ತು ಅವಿಧೇಯರಾಗುತ್ತಾರೆ ಎಂದು ಬಾಲಗಂಗಾಧರ ತಿಲಕ್ ಹಾಗೂ ಇತರ ಸುಧಾರಣಾ ವಿರೋಧಿಗಳ ತರ್ಕವಾಗಿತ್ತು. ಮಹಿಳೆಯರು ಅರ್ಥ ಮಾಡಿಕೊಳ್ಳಲು ಸಾಧ್ಯವಿರದ ವಿಷಯಗಳನ್ನು ಅವರ ಮೇಲೆ ಹೇರಬಾರದು ಮತ್ತು ಮಹಿಳೆಯರು ಆಂಗ್ಲ ಭಾಷೆ ಯಾವುದೇ ರೀತಿಯ ಸ್ಪಷ್ಟವಾದ ಜ್ಞಾನವನ್ನು ನೀಡುವುದಿಲ್ಲವಾದ್ದರಿಂದ ಮಹಿಳೆಯರು ಆಂಗ್ಲ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆಯುವುದರಿಂದ ಯಾವುದೇ ದೊಡ್ಡ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ತಿಲಕರು ಭಾವಿಸಿದ್ದರು. ಆದರೆ ಬಾಲಕರಿಗೆ ಆಂಗ್ಲ ಶಿಕ್ಷಣ ನೀಡುವ ವಿಷಯದಲ್ಲಿ ತಿಲಕರ ಧೋರಣೆಯೇ ಬೇರೆಯಾಗಿತ್ತು. ವಿಧವೆಯರ ಸ್ಥಿತಿಯ ಬಗ್ಗೆ: ವಿಧವೆಯರ ಪುನರ್‌ವಿವಾಹಕ್ಕೆ ಕರೆ ನೀಡಿದ ಸಮಾಜ ಸುಧಾರಕರ ಪ್ರಯತ್ನಗಳನ್ನು ಬಾಲಗಂಗಾಧರ ತಿಲಕರು ವಿರೋಧಿಸುತ್ತಿದ್ದರು. ವೈಧವ್ಯ ಎನ್ನುವುದು ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರ ನಡುವಿನ ಅಸಮಾನತೆಯನ್ನು ಸರಿದೂಗಿಸಲು ಪ್ರಕೃತಿಯೇ ಕಂಡುಕೊಂಡ ದಾರಿಯಾಗಿದೆ ಎನ್ನುವುದು ತಿಲಕರ ಅಭಿಪ್ರಾಯವಾಗಿತ್ತು. ಒಬ್ಬ ವಿಧವೆ ಪುನರ್‌ವಿವಾಹವಾದರೆ ಒಬ್ಬಳು ಯುವತಿಯ ಪತಿಯನ್ನು ಕಿತ್ತುಕೊಂಡಾಗುತ್ತದೆ. ಹಾಗಾಗಿ ಹೆಚ್ಚುಹೆಚ್ಚು ವಿಧವೆಯರು ಪುನರ್‌ವಿವಾಹವಾದರೆ ಹೆಚ್ಚುಹೆಚ್ಚು ಹೆಣ್ಮಕ್ಕಳಿಗೆ ಪತಿಯರನ್ನು ಹುಡುಕುವುದು ಕಷ್ಟವಾಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಹಾಗಾಗಿ, ಮಹಿಳಾ ಸಬಲೀಕರಣ ಮತ್ತು ವಿಮೋಚನೆಯ ವಿಷಯದಲ್ಲಿ ಬಾಲಗಂಗಾಧರ ತಿಲಕರ ದೃಷ್ಟಿಕೋನ ಕಟ್ಟರ್‌ವಾದಿ ಪಂಗಡಕ್ಕೆ ಸೇರಿದ್ದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News