ಪರೀಕ್ಷೆ ಮತ್ತು ನಿರೀಕ್ಷೆ

Update: 2019-03-23 19:32 GMT

ಭಾಗ-13

► ಅಧ್ಯಯನ ಮತ್ತು ಅರಿವು

ನಿರೀಕ್ಷೆಯಲ್ಲಿ ನೈತಿಕತೆ

ಪರೀಕ್ಷೆ ಎಂಬುದನ್ನು ನಿರೀಕ್ಷೆಯಿಂದಲೇ ಎದುರಿಸುವುದು. ಯಾವುದೇ ಒಂದು ಪರೀಕ್ಷೆಯನ್ನು ಎದುರಿಸುತ್ತಿದ್ದೇವೆಂದರೆ ಅದರಲ್ಲಿ ಉತ್ತೀರ್ಣರಾಗಬೇಕೆಂಬುದೇ ಅದರ ಪ್ರಾಥಮಿಕ ನಿರೀಕ್ಷೆ. ಅದರಲ್ಲಿ ವೈರಾಗ್ಯವೆಂಬುದಿಲ್ಲ. ಅನುತ್ತೀರ್ಣತೆ ಎಂದಿಗೂ ಫಲವಲ್ಲ, ನಿರೀಕ್ಷೆಯಲ್ಲ. ಆದರೆ, ಅತ್ಯಾಸೆಬುರುಕತನ ಇರಬಾರದು. ಅಂತಹ ಅತ್ಯಾಸೆಬುರುಕತ ನದಿಂದ ಪರೀಕ್ಷೆ ಹೆಚ್ಚು ಒತ್ತಡದಿಂದ ಕೂಡುತ್ತದೆ. ಮಾನಸಿಕ ಒತ್ತಡ ಮಾತ್ರವಲ್ಲದೇ, ಭಾವನಾತ್ಮಕ ವಾಗಿಯೂ ಕೂಡ ಕುಗ್ಗುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಪರೀಕ್ಷೆಯ ನೈತಿಕತೆಯೇ ಅಲ್ಲಿ ಇಲ್ಲವಾಗುತ್ತದೆ. ಉದಾಹರಣೆಗೆ ಯಾರು ಹೇಗಾದರೂ ಫೇಲಾಗಲಿ, ಹಾಳಾಗಲಿ, ತಾನು ಮಾತ್ರ ಅತ್ಯಂತ ಉತ್ತಮ ಅಂಕದಿಂದ ಉತ್ತೀರ್ಣನಾಗಿಬಿಡಬೇಕು ಅಥವಾ ಇತರ ರಿಗೆಲ್ಲರಿಗಿಂತ ಉತ್ತಮ ಅಂಕ ತನಗೇ ಬರಬೇಕು ಎಂಬುದನ್ನೂ ಕೂಡಾ ಮನಸ್ಸಿನಲ್ಲಿ ಹೊಂದಿರ ಕೂಡದು. ಒಂದು ವಿಷಯವಂತೂ ಸ್ಪಷ್ಟ. ನೈತಿಕವಾಗಿ ಸರಳತೆಯನ್ನೂ ಮತ್ತು ವೈಶಾಲ್ಯವನ್ನೂ ಹೊಂದಿಲ್ಲದಿರುವವರು ಸಾಮಾನ್ಯವಾಗಿ ಅನಾರೋಗ್ಯಕರವಾದ ಮಾನಸಿಕ ಒತ್ತಡವನ್ನು ಹೊಂದಿ ರುತ್ತಾರೆ. ಜೊತೆಗೆ ಬೌದ್ಧಿಕವಾಗಿ ಅವರೆಷ್ಟೇ ಸಾಧನೆಯನ್ನು ಮಾಡಿದ್ದರೂ ಅವರ ಸಾಧನೆಯ ಫಲಿತದಲ್ಲಿ ವ್ಯಕ್ತಿತ್ವವು ರೋಗಗ್ರಸ್ತವಾಗಿ ಅಭಿವ್ಯಕ್ತವಾಗುತ್ತದೆ. ಇದು ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣವಾಗುವುದರಲ್ಲಿ ಮಾತ್ರವಲ್ಲ, ಯಾವುದೇ ಕ್ಷೇತ್ರದಲ್ಲಿ (ಸ್ಪರ್ಧೆ ಇರಲಿ, ಇಲ್ಲದಿರಲಿ) ಅನ್ವಯವಾಗುತ್ತದೆ.

ಪರೀಕ್ಷೆಯಲ್ಲಿ ನೈತಿಕತೆ ಎಂದರೆ, ಎಲ್ಲರಿಗಿಂತ ತನಗೊಬ್ಬನಿಗೇ ಅತ್ಯುತ್ತಮ ಅಂಕ ಬರಬೇಕೆಂದಾ ಗಲಿ, ಯಾರು ಅನುತ್ತೀರ್ಣರಾದರೂ ಪರವಾಗಿಲ್ಲ ತಾನಂತೂ ಉತ್ತೀರ್ಣನಾಗಬೇಕು ಇತ್ಯಾದಿ ಸ್ವಾರ್ಥಪರ ಆಲೋಚನೆಗಳು. ಒಂದು ಶಿಕ್ಷಣ ಸಂಸ್ಥೆಯಾಗಲಿ, ಅಥವಾ ವ್ಯಕ್ತಿಗತವಾಗಿ ಶಿಕ್ಷಕನಾಗಲಿ ಎಂದೂ ಹಾಗೆ ಯೋಚಿಸಲಾರ. ಶಿಕ್ಷಕ ಮತ್ತು ಶಿಕ್ಷಣ ಸಂಸ್ಥೆಯು ತನ್ನೆಲ್ಲಾ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಉತ್ತೀರ್ಣರಾಗಲಿ ಎಂದೇ ಬಯಸುತ್ತಾರೆ, ಆಶಿಸುತ್ತಾರೆ ಮತ್ತು ಪ್ರಯತ್ನಿಸುತ್ತಾರೆ. ಆದರೆ ಒಂದು ಶಿಕ್ಷಣ ಸಂಸ್ಥೆಯು ಮತ್ತೊಂದು ಶಿಕ್ಷಣ ಸಂಸ್ಥೆಯ ಅವನತಿಯನ್ನು ಬಯಸಿದ್ದಲ್ಲಿ, ಅಥವಾ ಶಿಕ್ಷಕನು ತನ್ನ ವಿಷಯದಲ್ಲಿ ಮಕ್ಕಳೆಲ್ಲಾ ಚೆನ್ನಾಗಿ ಮಾಡಿ, ಬೇರೆ ವಿಷಯದಲ್ಲಿ ಹೇಗಾದರೂ ಹಾಳಾಗಿ ಹೋಗಲಿ, ತನಗೆ ಕೆಟ್ಟ ಹೆಸರು ಬರಬಾರದು ಎಂದು ಬಯಸಿದ್ದೇ ಆದಲ್ಲಿ, ಅಲ್ಲಿ ನೈತಿಕ ನಿರೀಕ್ಷೆಯ ಅವನತಿಯಾಗಿದೆ ಎಂದೇ ಅರ್ಥ. ನಿರೀಕ್ಷೆಯಲ್ಲಿ ನೈತಿಕತೆ ಎಂದರೆ, ನೇರವಾದ, ಸ್ವಾರ್ಥಪರವಲ್ಲದ, ಪರರಿಗೆ ಕೇಡನ್ನು ಬಯಸದ ಸರಳವಾದ ಫಲಿತಾಂಶವೆಂದೇ ಅರ್ಥ. ಒಟ್ಟಾರೆ ಫಲಿತಾಂಶದಲ್ಲಿ ಪರರ ಅವನತಿಯು ತನ್ನ ಉನ್ನತಿಯ ಮಾನ ದಂಡವಾಗದಿರಲೆಂಬುದೇ ನೈತಿಕ ನಿರೀಕ್ಷೆಯೆಂಬುದರ ತಾತ್ಪರ್ಯ. 

ನಿರೀಕ್ಷೆಯಲ್ಲಿ ಸಿದ್ಧತೆ

ಬಹಳಷ್ಟು ಜನ ಪೋಷಕರು ಹೇಗಾದರೂ ಸರಿ ಮಕ್ಕಳು ಉತ್ತಮ ಅಂಕಗಳನ್ನು ತೆಗೆದುಕೊಂಡರೆ ಸಾಕು ಎಂಬ ನಿರೀಕ್ಷೆಯಲ್ಲಿರುತ್ತಾರೆ. ಹೇಗಾದರೂ ಸರಿ - ಈ ಧೋರಣೆ ಬಹಳ ಅಪಾಯಕಾರಿ ಮತ್ತು ಅನೈತಿಕವಾದದ್ದು.

ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆ; ಈ ಮೂರೂ ಸ್ತಂಭಗಳು ಮಕ್ಕಳ ಪರೀಕ್ಷೆಗೆ ಬಹಳ ತಾತ್ವಿಕವಾದ ಮತ್ತು ತಾಂತ್ರಿಕವಾದ ಬುನಾದಿಯನ್ನು ನೀಡಬೇಕು. ತಾತ್ವಿಕವಾಗಿ ಈ ಮೇಲೆ ಒಂದು ಸ್ಪಷ್ಟತೆಯನ್ನು ಪಡೆದುಕೊಂಡಿದ್ದೇವೆ. ನೈತಿಕತೆಯೇ ತಾತ್ವಿಕತೆ. ಇನ್ನು ತಾಂತ್ರಿಕವಾಗಿ ಕೆಲವು ಅಂಶಗಳನ್ನು ಅನುಸರಿಸಬೇಕು. 

1.ಮಕ್ಕಳಿಗೆ ಸರಳವಾದ ಪದಗಳಿಂದ ತಾವೇ ಟಿಪ್ಪಣಿ ಬರೆಯುವುದನ್ನು ಅಭ್ಯಾಸ ಮಾಡಿಸಿದ್ದರೆ ಅದು ಪರೀಕ್ಷೆಯಲ್ಲಿ ತಾರ್ಕಿಕವಾದ ಸ್ಮರಣೆಯಿಂದ ಚೆನ್ನಾಗಿ ಬರೆಯುತ್ತಾರೆ. ಯಾಂತ್ರಿಕವಾದ ಸ್ಮರಣೆಯು ಕೈ ಕೊಡುವುದು ಮಾತ್ರವಲ್ಲದೇ ಅವರ ಕಲಿಕೆಯ ಸತ್ವಕ್ಕೆ ಏನೂ ಸಹಕಾರಿ ಆಗುವುದಿಲ್ಲ. ಅವರ ವಿದ್ಯೆಯು ಪರಿಣಾಮಕಾರಿಯೂ ಆಗಿರುವುದಿಲ್ಲ.

2.ವಾಕ್ಯ ಸಂಯೋಜನೆಗಳು ಸಂಕೀರ್ಣವಾಗಿದ್ದಷ್ಟೂ ಮಕ್ಕಳಿಗೆ ತ್ರಾಸದಾಯಕವೇ ಆಗಿರುತ್ತದೆ.

3.ನೆನಪಿನಲ್ಲಿ ಇಟ್ಟುಕೊಳ್ಳಲು ಅತ್ಯಂತ ಉತ್ತಮ ವಿಧಾನವೆಂದರೆ, ಸಮಗ್ರ ಪಠ್ಯವನ್ನು ಹಲವು ಅಂಶಗಳಾಗಿ ಭಾಗಗಳನ್ನಾಗಿ ಮಾಡಬೇಕು. ಆ ಅಂಶಗಳು ನೇರವಾದ ವಾಕ್ಯಗಳಾಗಿ ಪ್ಯಾಸಿವ್ ವಾಕ್ಯಗಳಲ್ಲಿರಬಾರದು.

4.ಮುಖ್ಯ ಶೀರ್ಷಿಕೆ, ಉಪಶೀರ್ಷಿಕೆ, ಪ್ರಾರಂಭದ ವಾಕ್ಯಗಳಲ್ಲೇ ಮುಖ್ಯಾಂಶ ಹೇಳಿರು ವುದು; ಇತ್ಯಾದಿಯಾಗಿ ಭಾಗಗಳನ್ನು ಮಾಡಿದ್ದರೆ ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಇದರಿಂದ ವಿಷಯಗಳು ಸ್ಪಷ್ಟವಾಗಿ ಅರಿವಿಗೆ ನಿಲುಕುತ್ತವೆ.

5.ಪರೀಕ್ಷೆಗೆ ಓದುವಾಗ ಒಂದೇ ಸಮನೆ ಕುಳಿತು ಓದುತ್ತಿರಬಾರದು. ಸಾಕಷ್ಟು ಮಧ್ಯಂತರದಲ್ಲಿ ವಿರಾಮಗಳಿರಬೇಕು. ದಿನವೆಲ್ಲಾ ಒಂದೇ ಸಮನೆ ಕುಳಿತು ಓದುವವರಿಗಿಂತ ಮಧ್ಯೆ ಮಧ್ಯೆ ಸಾಕಷ್ಟು ವಿರಾಮ ತೆಗೆದುಕೊಂಡು ಬಿಡದೇ ಓದುವವರು ಉತ್ತಮ ಫಲಿತಾಂಶವನ್ನು ಹೊಂದುತ್ತಾರೆ.

6.ಓದುವುದು, ಓದಿದನ್ನೇ ಮತ್ತೆ ಮತ್ತೆ ಓದುವುದು; ಹೀಗೆ ಮಾಡುವುದಕ್ಕಿಂತ ಸ್ಮರಣೆಗೆ ತಂದು ಕೊಳ್ಳುವ ವಿಧಾನ ಉತ್ತಮವಾದದ್ದು. ಚೆನ್ನಾಗಿ ಓದುವುದು ಎಂದರೆ ಒಂದೇ ಸಮನೆ ಕುಳಿತುಕೊಂಡು ಪದೇ ಪದೇ ಓದುವುದಲ್ಲ. ಓದಿದ್ದನ್ನು ಪದೇ ಪದೇ ಯಾವುದೇ ಪಠ್ಯ ಅಥವಾ ಟಿಪ್ಪಣಿಯ ನೆರವಿಲ್ಲದೇ ಸ್ಮರಣೆಗೆ ತಂದುಕೊಳ್ಳುವುದು.

7.ಒಂದಷ್ಟು ಓದಿದ ಮೇಲೆ ಪುಸ್ತಕವನ್ನು ಮುಚ್ಚಿಟ್ಟು, ಕಣ್ಮುಚ್ಚಿ ಶಾಂತಚಿತ್ತರಾಗಿ ಓದಿದ್ದನ್ನು ಸ್ಮರಣೆಗೆ ತಂದುಕೊಂಡು ಮನನ ಮಾಡುವುದು.

8.ತಮಗೆ ತಾವೇ ಪ್ರಶ್ನೆಗಳನ್ನು ಹಾಕಿಕೊಂಡು ಅಧ್ಯಯನ ಮಾಡಿರುವುದರಲ್ಲಿ ಉತ್ತರಗಳನ್ನು ಕಂಡುಕೊಳ್ಳುವುದು.

9.ಮುಂದಿನದನ್ನು ಓದುವಾಗ ಮುಖ್ಯ ಮತ್ತು ಪ್ರಮುಖ ಎನಿಸುವ ವಾಕ್ಯಗಳ ಕೆಳಗೆ ಗೆರೆ ಎಳೆಯುವುದು ಅಥವಾ ಮತ್ತೊಂದು ಕಡೆ ಬರೆದಿಡುವುದು ಇತ್ಯಾದಿ ಕಲಿಕೆಗೆ ಪೂರಕ.

10.ಓದಿದ್ದಷ್ಟನ್ನೂ ಒಟ್ಟಾರೆ ಗ್ರಹಿಸಬೇಕು. ಅದನ್ನು ಬೇರೆಯವರಿಗೆ ಹೇಳಬೇಕು. ಮನೆಯ ವರಿಗೆ ಅಥವಾ ಇತರ ಸ್ನೇಹಿತರಿಗೆ ಅದು ಬೇಕಿರಲಿ, ಬೇಡದಿರಲಿ ತನ್ನ ಕಲಿಕೆ ಸ್ಪಷ್ಟವಾಗಿರು ವುದನ್ನು ತಿಳಿದುಕೊಳ್ಳಲು ಹಾಗೆ ಹಂಚಿಕೊಳ್ಳುವುದು ತಾವು ಎಷ್ಟರ ಮಟ್ಟಿಗೆ ಗ್ರಹಿಸಿದ್ದೇವೆ ಎಂಬುದನ್ನು ತಿಳಿದಂತಾಗುತ್ತದೆ.

11.ತನ್ನನ್ನು ತಾನೇ ಪರೀಕ್ಷಿಸಿಕೊಳ್ಳಲು ಕೆಲವು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ ತಾವೇ ಅದರ ವೌಲ್ಯ ಮಾಪನ ಮಾಡುವುದು ಕೂಡ ಒಂದು ಉತ್ತಮ ವಿಧಾನ. 

12.ಓದಿದ್ದನ್ನು ಬರಿಯ ಪರೀಕ್ಷೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಎಂದು ಮಾತ್ರ ಛಾಪು ಒತ್ತಿಡದೇ ನಿತ್ಯ ಬದುಕಿನ ಇತರ ವಿಷಯಗಳಿಗೆ ಅನ್ವಯಿಸುತ್ತಾ ನೋಡುವುದು ಕೂಡ ಪರೀಕ್ಷೆಗೆ ಅನುಕೂಲವಾಗುತ್ತದೆ.

13.ಓದಿರುವುದನ್ನು ಕಣ್ಣ ಮುಂದೆ ತಂದುಕೊಳ್ಳುವುದು ಬಹಳ ಉತ್ತಮವಾದಂತಹ ಅಭ್ಯಾಸ. ಚಿತ್ರರೂಪದಲ್ಲಿ ತಂದುಕೊಳ್ಳುವರೋ ಅಥವಾ ಬರಹದ ರೂಪದಲ್ಲಿ ತಂದುಕೊಳ್ಳುವರೋ ಒಟ್ಟಾರೆ ಅಧ್ಯಯನ ಮಾಡಿರುವುದನ್ನು ಕಲ್ಪನೆಯಲ್ಲಿ ಮೂಡಿಸಿಕೊಳ್ಳುವುದು ಬಹಳ ಉತ್ತಮ ವಾದ ಅಭ್ಯಾಸ. ಈ ರೀತಿಯ ಹಲವು ಸಿದ್ಧತೆಗಳು ಮತ್ತು ಪ್ರಯೋಗಗಳು ನಿರೀಕ್ಷಿತ ಫಲಿತಾಂಶವನ್ನು ನೈತಿಕ ವಾಗಿ ಪಡೆಯಲು ಸಹಕಾರಿಯಾಗುತ್ತವೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News