ಐಪಿಎಲ್ ಹಿನ್ನೆಲೆ: ಮಾ.28 ರಿಂದ ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ

Update: 2019-03-24 16:40 GMT

ಬೆಂಗಳೂರು, ಮಾ.24: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28 ರಿಂದ ಮೇ 4 ರವರೆಗೂ ನಡುಲಿರುವ ವಿವಿಧ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯ ಹಿನ್ನೆಲೆ, ಪಂದ್ಯ ವೀಕ್ಷಣೆಗೆ ಬರುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸೇವೆಯನ್ನು ಮಧ್ಯರಾತ್ರಿ 12.30ರ ವರೆಗೆ ವಿಸ್ತರಿಸಲಾಗಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28, ಎ. 5, 21,24, 30 ಹಾಗೂ ಮೇ 4 ರಂದು ಐಪಿಎಲ್ ಪಂದ್ಯಾವಳಿಗಳು ನಿಗದಿಗೊಂಡಿವೆ. ಈ ಹಿನ್ನೆಲೆಯಲ್ಲಿ ಮೆಟ್ರೋ ತನ್ನ ವಾಣಿಜ್ಯ ಸಂಚಾರ ಸೇವೆಯನ್ನು ವಿಸ್ತರಿಸಿದ್ದು, ಆ ದಿನಗಳಲ್ಲಿ ರಾತ್ರಿ 12.30 ಕ್ಕೆ ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ಯಲಚೇನಹಳ್ಳಿ ಮತ್ತು ನಾಗಸಂದ್ರದಿಂದ ಮೆಜೆಸ್ಟಿಕ್ ಕಡೆ ರೈಲು ಹೊರಡಲಿದೆ.

ಕೊನೆದಿನ ಸೇವೆಯು ಕೆಂಪೇಗೌಡ ನಿಲ್ದಾಣದಿಂದ ಎಲ್ಲ ನಾಲ್ಕೂ ದಿಕ್ಕುಗಳಿಗೂ ಮಧ್ಯರಾತ್ರಿ 1 ಗಂಟೆ ವರೆಗೆ ಸಿಗಲಿದೆ. ಪಂದ್ಯ ಮುಗಿದ ನಂತರ ಪ್ರಯಾಣಿಕರು ಟೋಕನ್‌ಗಾಗಿ ಕಾಯದಿರಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಪರಿಚಯಿಸಲಾಗಿದೆ. ಈ ಟಿಕೆಟ್‌ಗಳನ್ನು ಪ್ರಯಾಣಿಕರು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7ರವರೆಗೆ ಯಾವುದೇ ಮೆಟ್ರೋ ನಿಲ್ದಾಣಗಳಿಂದ ಖರೀದಿಸಬಹುದು.

ಈ ಪೇಪರ್ ಟಿಕೆಟ್‌ಗಳು ಪಂದ್ಯಾವಳಿ ದಿನದ ಕೊನೆಯ ಮೆಟ್ರೋ ರೈಲು ಸೇವೆವರೆಗೆ ಮಾತ್ರ ಅನ್ವಯ ಆಗಲಿದೆ. ಪಂದ್ಯದ ದಿನದಂದು ಕಬ್ಬನ್ ಪಾರ್ಕ್ ಮೆಟ್ರೋ ರೈಲು ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ರಾತ್ರಿ 10 ಗಂಟೆ ನಂತರ ಪ್ರಯಾಣ ದರ 50 ರೂ. ಇರಲಿದೆ.

ಈ ದಿನಗಳಲ್ಲಿ ರಾತ್ರಿ 10ರ ನಂತರ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಸಾಮಾನ್ಯ ಟೋಕನ್ ಮಾರಾಟವಿರುವುದಿಲ್ಲ. ಇಲ್ಲಿಂದ ಪ್ರಯಾಣಿಸುವಾಗ ಪೇಪರ್ ಟಿಕೆಟ್ ಮಾತ್ರ ಉಪಯೋಗಿಸಬೇಕು. ಇನ್ನು ಎ.7ರಂದು ಸಂಜೆ 4 ಗಂಟೆಗೆ ಪಂದ್ಯವಿರುವುದರಿಂದ ಅಂದು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 11 ಮಧ್ಯಾಹ್ನ 3 ಗಂಟೆವರೆಗೆ ಪೇಪರ್ ಟಿಕೆಟ್ ಲಭ್ಯವಿರುತ್ತವೆ. ಉಳಿದಂತೆ ಟೋಕನ್, ಸ್ಪಾರ್ಟ್‌ಕಾರ್ಡ್ ಉಪಯೋಗ ಎಂದಿನಂತೆ ಇರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News