ಎನ್‌ಡಿಎ ಸರಕಾರ ಜನತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದೆ: ಡಿ.ವಿ.ಸದಾನಂದಗೌಡ

Update: 2019-03-24 16:43 GMT

ಬೆಂಗಳೂರು, ಮಾ.24: ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರ 5 ವರ್ಷದಲ್ಲಿ ಜನತೆಗೆ ಸ್ವಾಭಿಮಾನದ ಬದುಕು, ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಸದೃಢತೆಯ ಬದುಕನ್ನು ಕಟ್ಟಿಕೊಟ್ಟಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ರವಿವಾರ ಯಶವಂತಪುರದ ಮೇವಾರ್ ಭವನದಲ್ಲಿ ಕರಾವಳಿ ಕನ್ನಡಿಗರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುಪಿಎ ಪಕ್ಷ ಈ ದೇಶದಲ್ಲಿ ಹಲವು ದಶಕಗಳ ಕಾಲ ಆಡಳಿತವನ್ನು ನಡೆಸಿದರೂ ಜನತೆಗೆ ಯಾವುದೇ ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಡಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬರೀ 5 ವರ್ಷದಲ್ಲಿಯೇ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನರಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರಕಾರ ಆಡಳಿತದಲ್ಲಿದ್ದಾಗ ಭಾರತ ಅಭಿವೃದ್ಧಿಯಲ್ಲಿ 114ನೆ ಸ್ಥಾನದಲ್ಲಿತ್ತು. ಅದೇ ಎನ್‌ಡಿಎ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಮೂರ್ನಾಲ್ಕು ವರ್ಷಗಳಲ್ಲಿಯೆ ವಿಶ್ವದ ಅಭಿವೃದ್ಧಿ ದೇಶಗಳ ಪಟ್ಟಿಯಲ್ಲಿ 77ನೆ ಸ್ಥಾನವನ್ನು ಪಡೆಯಿತು. ಮತ್ತೊಂದು ಬಾರಿ ಎನ್‌ಡಿಎ ನೇತೃತ್ವದ ಸರಕಾರ ಆಡಳಿತಕ್ಕೆ ಬಂದರೆ ಅಭಿವೃದ್ಧಿ ದೇಶಗಳ ಪಟ್ಟಿಯಲ್ಲಿ ಭಾರತ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರದ ಒಟ್ಟು ಬಜೆಟ್‌ನಲ್ಲಿ ಶೇ.30ರಷ್ಟು ಪಾಲನ್ನು ಜನರ ಆರೋಗ್ಯಕ್ಕಾಗಿ ಮೀಸಲಿಟ್ಟಿದೆ. ಉಳಿದ ಹಣವನ್ನು ಶಿಕ್ಷಣ, ರಕ್ಷಣೆ, ವಸತಿ, ರಸ್ತೆ ನಿರ್ಮಾಣಕ್ಕೆ ಮೀಸಲಿಟ್ಟಿದೆ. ಮುಂದಿನ ಬಜೆಟ್‌ನಲ್ಲೂ ಜನರ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಆಯುಷ್ಮಾನ್ ಭಾರತ ಯೋಜನೆಯಂತಹ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತೆ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದೆವೆ ಎಂದು ತಿಳಿಸಿದರು.

ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥನಾರಾಯಣ ಮಾತನಾಡಿ, 2019ರ ಲೋಕಸಭಾ ಚುನಾವಣೆಯನ್ನು ಬರೀ ಚುನಾವಣೆ ಎನ್ನುವುದಕ್ಕಿಂತಲೂ ನಿರ್ಣಾಯಕ ಚುನಾವಣೆ ಎಂದು ಪರಿಗಣಿಸಿ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News