ಅಕ್ರಮ ಭೂಕಬಳಿಕೆಯ ವಿರುದ್ಧ ಹೋರಾಟದ ರೂವಾರಿ ಕೆ.ಪ್ರಭಾಕರ ರೆಡ್ಡಿ: ಎಚ್.ಎಸ್.ದೊರೆಸ್ವಾಮಿ

Update: 2019-03-24 17:16 GMT

ಬೆಂಗಳೂರು, ಮಾ.24: ಕನ್ನಡಪರ ಹೋರಾಟಗಾರ, ಮಾಜಿ ಶಾಸಕ ಕೆ.ಪ್ರಭಾಕರ ರೆಡ್ಡಿ ಬೆಂಗಳೂರಿನ ಲಕ್ಷಾಂತರ ಕೋಟಿ ರೂ.ಮೌಲ್ಯದ ಅಕ್ರಮ ಭೂ ಕಬಳಿಕೆದಾರರ ವಿರುದ್ಧ ಹೋರಾಟ ರೂಪಿಸಿದ ರೂವಾರಿ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸ್ಮರಿಸಿದರು.

ರವಿವಾರ ಕನ್ನಡ ವೇದಿಕೆ, ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಗರದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ಕೆ.ಪ್ರಭಾಕರ ರೆಡ್ಡಿ ಅವರ 5ನೆ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಕಟ್ಟುವುದೆಂದರೆ ಕೇವಲ ಘೋಷಣೆಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ನಡೆಯುವ ಅನ್ಯಾಯಗಳನ್ನು ಸರಿಪಡಿಸುತ್ತಲೆ ಪ್ರಜ್ಞಾವಂತ ರಾಜ್ಯವನ್ನಾಗಿ ರೂಪಿಸಬೇಕಾದದ್ದು ಪ್ರತಿಯೊಬ್ಬ ಕನ್ನಡಪರ ಕಾರ್ಯಕರ್ತನ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕೆ.ಪ್ರಭಾಕರ ರೆಡ್ಡಿ ಅವರ ಹೋರಾಟಗಳ ಮಾರ್ಗಗಳು ಇಂದಿನ ಯುವಜನತೆಗೆ ದಾರಿದೀಪವಾಗಲಿ ಎಂದು ಅವರು ಆಶಿಸಿದರು.

ಬೆಂಗಳೂರಿನಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿ, ನೂರಾರು ಎಕರೆ ಕೆರೆಗಳ ಜಾಗವನ್ನು ಭೂಗಳ್ಳರು ಆಕ್ರಮಿಸಿಕೊಂಡಿದ್ದರು. ಇವರಿಗೆ ರಾಜಕೀಯ ಬೆಂಬಲಿಗರು ಹಾಗೂ ಅಧಿಕಾರಿಗಳ ಬೆಂಬಲವು ಇತ್ತು. ಇಂತಹ ಸಂದರ್ಭದಲ್ಲಿ ಕೆ.ಪ್ರಭಾಕರ ರೆಡ್ಡಿಯವರು ಕನ್ನಡ ಕಾರ್ಯಕರ್ತರನ್ನು ಕಟ್ಟಿಕೊಂಡು ಅಕ್ರಮ ಭೂಗಳ್ಳರ ವಿರುದ್ಧ ಹೋರಾಟ ರೂಪಿಸಿದ್ದರು. ಇದರ ಪರಿಣಾಮವಾಗಿ ವಿಧಾನಸೌಧದಲ್ಲಿ ಸರಕಾರಿ ಭೂ ಕಬಳಿಕೆಯ ಬಗ್ಗೆ ತನಿಖೆ ಮಾಡಲು ಸಮಿತಿ ರಚಿಸಲಾಯಿತು ಎಂದು ಅವರು ನೆನಪು ಮಾಡಿಕೊಂಡರು.

ಜನಪರವಾದ ಮೌಲ್ಯಗಳು ನಶಿಸುತ್ತಿರುವ ಇವತ್ತಿನ ಸಂದರ್ಭದಲ್ಲಿ ಯುವ ಜನತೆಯನ್ನು ಸರಿದಾರಿಗೆ ತರುವುದು ಸವಾಲಿನ ಕೆಲಸವಾಗಿದೆ. ದೇಶ ಹಾಗೂ ರಾಜ್ಯಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳ ಜೀವನಗಾತೆಗಳನ್ನು ಯುವ ಜನತೆಗೆ ತಲುಸುವಂತಹ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಹಿರಿಯ ಲೇಖಕ ರು.ಬಸಪ್ಪ ಕನ್ನಡ ಚಳವಳಿ ನೆನಪಿನ ಪುಟುಗಳಿಂದ ಕೃತಿ ಬಿಡುಗಡೆಗೊಳ್ಳುತ್ತಿರುವುದು ಸಂತಸದ ವಿಚಾರವೆಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ನಾಡು, ನುಡಿಯ ಉಳಿವಿಗಾಗಿ ಕನ್ನಡ ಕಾರ್ಯಕರ್ತರ ಪಡೆಯನ್ನು ಹುಟ್ಟು ಹಾಕಿದ ಕೆ.ಪ್ರಭಾಕರ ರೆಡ್ಡಿ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸುತ್ತಾ ಬಂದವರು. ಒಂದು ಕಡೆ ಕನ್ನಡ ಕಾರ್ಯಕರ್ತರ ಪಡೆಯನ್ನು ಕಟ್ಟುವುದು, ಮತ್ತೊಂದೆಡೆ ಶಾಸಕರಾಗಿ ಶಾಸನ ಸಭೆಗಳಲ್ಲಿ ಕನ್ನಡಪರವಾದ ಕಾನೂನು ಜಾರಿಗೆ ತರುಲು ಶ್ರಮಿಸಿದವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ರು.ಬಸಪ್ಪ, ಕನ್ನಡಪರ ಹೋರಾಟಗಾರ ಟಿ.ಪಿ.ಪ್ರಸನ್ನ ಕುಮಾರ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಹೋರಾಟಗಾರರಾದ ಸಿದ್ದಯ್ಯ, ಎನ್.ಜಯರಾಮ್, ಚಳವಳಿ ರಾಮಕೃಷ್ಣ, ದ.ವಿನಾಯಕ, ವಿ.ನಾರಾಯಣ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News