ವೈದ್ಯಕೀಯ ವೃತ್ತಿ ಅತ್ಯಂತ ಗೌರವಯುತವಾದದ್ದು: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

Update: 2019-03-24 17:32 GMT

ಬೆಂಗಳೂರು, ಮಾ.24: ಜಗತ್ತಿನಲ್ಲಿ ವೈದ್ಯಕೀಯ ವೃತ್ತಿಯು ಅತ್ಯಂತ ಗೌರವಯುತವಾದದ್ದು. ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಇಂದಿಲ್ಲಿ ಬಣ್ಣಿಸಿದ್ದಾರೆ.

ರವಿವಾರ ಕಾಡುಗೋಡಿಯಲ್ಲಿರುವ ಸ್ಕೈ ಡಯಾಗ್ನಸ್ಟಿಕ್ ಹಾಗೂ ಆರೋಗ್ಯ ಕೇಂದ್ರದ ನಾಲ್ಕನೆ ವಾರ್ಷಿಕೋತ್ಸವದ ಅಂಗವಾಗಿ ವೈದ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ದಿನದ 24 ಗಂಟೆಯು ಸಕ್ರಿಯವಾಗಿ ಕೆಲಸ ಮಾಡುತ್ತಿರಬೇಕು. ಸಮಾಜಕ್ಕಾಗಿ ದುಡಿಯುವ ವೈದ್ಯರು, ತಮ್ಮ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಅವರ ಸೇವಾ ಮನೋಭಾವನೆಗೆ ಗೌರವ ಸಲ್ಲಿಸಲು ಹಮ್ಮಿಕೊಂಡಿರುವ ಈ ಸನ್ಮಾನ ಕಾರ್ಯಕ್ರಮ ಅರ್ಥ ಪೂರ್ಣವಾದದ್ದು ಎಂದು ಅವರು ಹೇಳಿದರು.

ಸಮಾಜವು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಮುಂದಿನ ಪೀಳಿಗೆಯನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕಿದ್ದರೆ, ಈಗಿನಿಂದಲೇ ಅದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಂತೋಷ್ ಹೆಗ್ಡೆ ಹೇಳಿದರು.

ರಾಜ್ಯದ ಲೋಕಾಯುಕ್ತನಾಗಿ ಐದು ವರ್ಷಗಳ ಕಾಲ ನಾನು ಕೆಲಸ ಮಾಡುವಾಗ ಸರಕಾರಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಹತ್ತಿರದಿಂದ ನೋಡಿದ್ದೇನೆ. ಸರಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ನೋಡಿದ್ದೇನೆ ಎಂದು ಸಂತೋಷ್ ಹೆಗ್ಡೆ ತಿಳಿಸಿದರು.

ಸ್ಕೈ ಡಯಾಗ್ನಸ್ಟಿಕ್ ಸೆಂಟರ್ ನಿರ್ದೇಶಕ ಡಾ.ಸಯ್ಯದ್ ಮುಝಮ್ಮಿಲ್ ಅಹ್ಮದ್ ಮಾತನಾಡಿ, ನಾಲ್ಕು ವರ್ಷಗಳಲ್ಲಿ 3ಲಕ್ಷಕ್ಕೂ ಹೆಚ್ಚಿನ ರೋಗಿಗಳು ನಮ್ಮ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. 93 ರೋಗಿಗಳಿಗೆ ತಲಾ 10 ಸಾವಿರ ರೂ.ಗಳಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. 17 ಮಂದಿ ಕಡುಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಿದ್ದೇವೆ ಎಂದರು.

ಈ ಆರೋಗ್ಯ ಕೇಂದ್ರವನ್ನು ಲಾಭದ ದೃಷ್ಟಿಯಿಂದ, ಹಣಕಾಸಿನ ವ್ಯವಹಾರಕ್ಕಾಗಿ ಆರಂಭಿಸಿಲ್ಲ. ಈ ಭಾಗದಲ್ಲಿರುವ ಕಡು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಅತೀ ಕಡಿಮೆ ವೆಚ್ಚದಲ್ಲಿ ನೀಡಲು ನಾವು ಪಣತೊಟ್ಟಿದ್ದೇವೆ ಎಂದರು. ಡಾ.ನೂರ್‌ಖಾನ್, ಅಮಾನುಲ್ಲಾ ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News