ಸಂಗೀತಕ್ಕೆ ಮಾನವೀಯ ಸಂಬಂಧ ಬೆಸೆಯುವ ಶಕ್ತಿಯಿದೆ: ಡಾ.ಮಹೇಶ್ ಜೋಶಿ

Update: 2019-03-24 18:26 GMT

ಬೆಂಗಳೂರು, ಮಾ.25: ಸಂಗೀತಕ್ಕೆ ಅಪಾರವಾದ ಮಾನವೀಯ ಸಂಬಂಧವನ್ನು ಬೆಸೆಯುವ ಶಕ್ತಿಯಿದ್ದು, ಅದಕ್ಕೆ ತಲೆದೂಗದ ವ್ಯಕ್ತಿಗಳೇ ಇಲ್ಲ ಎಂದು ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಕ ಡಾ.ಮಹೇಶ್ ಜೋಶಿ ಹೇಳಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಾಹಿತ್ಯ ಸಮಾಗಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕೂಡಿ ಆಡೋಣ ಬಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುಶ್ರಾವ್ಯ, ಸುಮಧುರ ಗೀತೆಗಳನ್ನು ಆಲಿಸುವುದರಿಂದ ಮಾನಸಿಕ ಆರೋಗ್ಯ ಸುಧಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಗೀತದಿಂದ ಅನೇಕ ಮಾನವ ಸಂಬಂಧಗಳು ಹತ್ತಿರವಾಗುತ್ತವೆ. ಹೀಗಾಗಿ, ಅದಕ್ಕೆ ಎಲ್ಲರೂ ತಲೆದೂಗುತ್ತಾರೆ. ಈ ಹಿಂದೆ ಸಾಹಿತ್ಯ ಮತ್ತು ಸಂಗೀತದ ಸಮ್ಮಿಲನದ ಸುಶ್ರಾವ್ಯ ಸುಮಧುರ ಚಲನಚಿತ್ರ ಗೀತೆಗಳನ್ನು ಕೇಳುತ್ತಿದ್ದರೆ ಮನಸ್ಸು ಪ್ರಫುಲ್ಲಗೊಳ್ಳುತ್ತಿತ್ತು. ಸಂಗೀತಕ್ಕೆ ಅಂತಹ ಆಕರ್ಷಣೆಯಿದೆ ಎಂದು ತಿಳಿಸಿದರು.

ಸಂಗೀತ ಮತ್ತು ಸಾಹಿತ್ಯ ಒಂದೇ ನಾಣ್ಯ ಎರಡು ಮುಖಗಳು. ಮಾನವೀಯ ಸಂಬಂಧಗಳನ್ನು ಬೆಸೆಯುವ ಶಕ್ತಿ ಸಂಗೀತಕ್ಕೆ ಇದೆ. ಜೊತೆಗೆ ಮಾನಸಿಕ ಆರೋಗ್ಯಕ್ಕೆ ಸಂಗೀತ ರಾಮಬಾಣವಾಗಿದೆ. ಒತ್ತಡದ ಜೀವನದಲ್ಲಿ ಸದಾ ಜಂಜಾಟದಲ್ಲಿ ತೊಡಗಿರುವರು ಸುಮಧುರ ಸಂಗೀತ ಆಲಿಸುವುದು ಅತ್ಯವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು.

2013 ರಿಂದ 2017ರವರೆಗೆ ನಾನು ದಿಲ್ಲಿಯಲ್ಲಿ ಕೆಲಸ ನಿರ್ವಸುತ್ತಿದ್ದಾಗ ಭಿಕ್ಷುಕನೋರ್ವ ನನ್ನನ್ನು ಗುರುತಿಸಿ ಮಾತನಾಡಿಸಿದ. ನನಗೆ ಆ ವ್ಯಕ್ತಿಯ ಪರಿಚಯವೇ ಇಲ್ಲ. ಆದರೂ ಕುತೂಹಲದಿಂದ ನೀನ್ಯಾರೂ ಎಂದು ಪ್ರಶ್ನಿಸಿದಾಗ ಆತನಿಂದ ಬಂದ ಉತ್ತರ ನನ್ನ ಮನಕರಗಿಸಿತು. ಆತ ಏನು ಹೇಳಿದ್ದ ಗೊತ್ತೇ ನಾನು ಒಬ್ಬ ಕನ್ನಡಿಗ. ನೀವು ಪ್ರತಿವಾರ ದೂರದರ್ಶನದಲ್ಲಿ ನಡೆಸಿಕೊಡುತ್ತಿದ್ದ ‘ಮಧುರ ಮಧುರವೀ ಮಂಜುಳಾ ಗಾನ’ ಕಾರ್ಯಕ್ರಮ ನೋಡುತ್ತಿದ್ದೆ. ಆ ನೆನಪಿನ ಶಕ್ತಿಯಿಂದ ಇಂದು ನಿಮ್ಮನ್ನು ಗುರುತಿಸುವಂತಾುತು ಎಂದು ಹೇಳಿದ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಟಿ.ಆರ್. ಲೋಕೇಶ್, ಜಯಲಕ್ಷ್ಮಿ, ರಾಜೇಶ್ವರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರಸಲಾಯಿತು. ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕಿ ಡಾ. ಜೈ ಶ್ರೀ ಅರವಿಂದ್, ಇಂದೂ ವಿಶ್ವನಾಥ್, ಟಿ.ಆರ್.ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News