ವೇಳಾಪಟ್ಟಿ ಪ್ರಕಾರವೇ ಸೂಪರ್ ಕಪ್ ಫುಟ್ಬಾಲ್

Update: 2019-03-24 18:45 GMT

ಪಣಜಿ, ಮಾ.24: ಭುವನೇಶ್ವರದಲ್ಲಿ ನಡೆಯಲಿರುವ ನಾಕೌಟ್ ಟೂರ್ನಿಯ ಬಹಿಷ್ಕಾರವನ್ನು ಐ-ಲೀಗ್ ಕ್ಲಬ್‌ಗಳು ಮುಂದುವರಿಸಿರುವ ಮಧ್ಯೆಯೂ ಅಖಿಲ ಭಾರತ ಫುಟ್ಬಾಲ್ ಒಕ್ಕೂಟವು (ಎಐಎಫ್‌ಎಫ್) ಸೂಪರ್ ಕಪ್‌ನ್ನು ಅದರ ವೇಳಾಪಟ್ಟಿ ಪ್ರಕಾರವೇ ನಡೆಸಲು ಮುಂದಾಗಿದೆ.

ಇದರಿಂದ ಸದ್ಯ ಎಐಎಫ್‌ಎಫ್ ಹಾಗೂ ಐ-ಲೀಗ್ ಕ್ಲಬ್‌ಗಳ ಮಧ್ಯೆ ಜಟಾಪಟಿ ಏರ್ಪಟ್ಟ್ಟಿದೆ ಹಾಗೂ ಅವರ ಮುಖ್ಯ ಬೇಡಿಕೆಯಾದ ಎಐಎಫ್‌ಎಫ್ ಅಧ್ಯಕ್ಷರ ಭೇಟಿಯನ್ನು ನಿಗದಿಪಡಿಸಲಾಗಿದ್ದರೂ ಇತರ ಸಮಸ್ಯೆಗಳು ಬಾಕಿ ಉಳಿದಿವೆ.

ಈ ಕ್ಲಬ್‌ಗಳ ಪೈಕಿ ಪ್ರಮುಖ ಮೂರು ತಂಡಗಳಾದ ಭುವನೇಶ್ವರದಲ್ಲಿ ತಮ್ಮ ಕ್ವಾಲಿಫೈಯರ್ಸ್ ಪಂದ್ಯಗಳನ್ನು ಬಹಿಷ್ಕರಿಸಿರುವ ಮಿನರ್ವ ಪಂಜಾಬ್, ಐಝ್ವಾಲ್ ಹಾಗೂ ಗೋಕುಲಂ ಕೇರಳ ತಂಡಗಳ ಭವಿಷ್ಯದ ಪ್ರಶ್ನೆ ಎದ್ದಿದೆ. ಈ ಕ್ಲಬ್‌ಗಳು ಕ್ವಾಲಿಫೈಯರ್ಸ್ ಪಂದ್ಯಗಳನ್ನು ಮತ್ತೆ ಆಡಿಸಬೇಕೆಂದು ವಿನಂತಿಸಿದ್ದವು. ಆದರೆ ಒಕ್ಕೂಟವು ನಿಯಮ ಹಾಗೂ ಕಾಯ್ದೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

‘‘ಕ್ವಾಲಿಫೈಯರ್ಸ್ ಪಂದ್ಯಾವಳಿಗಳ ವಿನ್ಯಾಸ ಬದಲಾವಣೆ ಹಾಗೂ ಪಂದ್ಯಗಳ ಮರು ಆಯೋಜನೆ ಕುರಿತು ಯಾವುದೇ ಚರ್ಚೆಗೆ ಆಸ್ಪದವಿಲ್ಲ ಎಂದು ನಾನು ಹೇಳಬಯಸುತ್ತೇನೆ. ಶನಿವಾರ ತಂಡಗಳ ನೋಂದಣಿ ಅಂತ್ಯಗೊಳ್ಳಲಿದೆ. ಸೂಪರ್ ಕಪ್ ಮಾ.29ರಂದು ವೇಳಾಪಟ್ಟಿಯ ಪ್ರಕಾರವೇ ನಡೆಯಲಿದೆ’’ ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಶನಿವಾರ ಕ್ಲಬ್‌ಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News